ಮಾಧ್ಯಮದ ಮೇಲೆ ಅತಿಯಾದ ಅಂಕುಶ ಸಲ್ಲ : ಮದ್ರಾಸ್ ಹೈಕೋರ್ಟ್ ಅಭಿಪ್ರಾಯ

jayalalitha
Published on

ಚೆನ್ನೈ: ಸರ್ಕಾರವು ಮಾಧ್ಯಮವನ್ನು ಶಿಕ್ಷಿಸುವಂತಹ ಪ್ರಾಸಿಕ್ಯೂಟರ್ ಆಗಬಾರದು ಎಂದು ಮದ್ರಾಸ್ ಹೈಕೋರ್ಟ್​ನ ವಿಭಾಗೀಯ ಪೀಠ ಗುರುವಾರ ಅಭಿಪ್ರಾಯ ಪಟ್ಟಿದೆ. ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವಾರು ಮಾಧ್ಯಮ ಸಂಸ್ಥೆಗಳ ವಿರುದ್ಧ ಹೂಡಿದ್ದ 28 ಮಾನನಷ್ಟ ಮೊಕದ್ದಮೆಗಳನ್ನು ವಜಾ ಮಾಡಿದ ನ್ಯಾಯಮೂರ್ತಿ ಅಬ್ದುಲ್ ಖುದ್ದೊಸ್, ಮಾಧ್ಯಮದ ವಿರುದ್ಧ ಸರ್ಕಾರಗಳು ಬೇಕಾಬಿಟ್ಟಿ ದಾವೆ ಹೂಡುವ ಪ್ರವೃತ್ತಿ ಸಲ್ಲ ಎಂದರು.

‘ಒಬ್ಬ ವ್ಯಕ್ತಿ ಅಥವಾ ಸಾರ್ವಜನಿಕ ನೌಕರ/ಸಾಂವಿಧಾನಿಕ ಅಧಿಕಾರಿ ಹಠಾತ್ ಶಿಕ್ಷಿಸುವ ಪ್ರವೃತ್ತಿ ತೋರಿಸಬಹುದು. ಆದರೆ ಸರ್ಕಾರ ಹಾಗೆ ಮಾಡಲಾಗದು. ಮಾನನಷ್ಟ ಮೊಕದ್ದಮೆ ವಿಷಯದಲ್ಲಿ ಅದು ಗರಿಷ್ಠ ತಾಳ್ಮೆ ಮತ್ತು ಪ್ರಬುದ್ಧತೆ ತೋರಬೇಕು. ಕ್ರಿಮಿನಲ್ ಮಾನನಷ್ಟ ಪ್ರಕರಣಗಳಲ್ಲಿ, ಅದರಲ್ಲೂ ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ದೊಡ್ಡ ಪ್ರಮಾಣದ ನಿಂದನಾತ್ಮಕ ವಿಚಾರಗಳನ್ನು ಹರಿಬಿಡುವ ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ, ಸರ್ಕಾರವು ಶಿಕ್ಷಿಸುವ ಹಠಾತ್ ಪ್ರವೃತ್ತಿ ತೋರಿಸಿದಲ್ಲಿ, ಸೆಷನ್ಸ್ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳ ರಾಶಿಯೇ ಬೀಳುತ್ತವೆ’ ಎಂದು ನ್ಯಾ.ಅಬ್ದುಲ್ ಹೇಳಿದರು.

‘ಪಾಲಕರನ್ನು ಮಕ್ಕಳು ದೂಷಿಸುವುದು ಸರ್ವೆಸಾಮಾನ್ಯ. ಆದರೆ ಅಂಥ ಕೃತ್ಯಕ್ಕಾಗಿ ಅವರು ತಮ್ಮ ಮಕ್ಕಳೇ ಅಲ್ಲ ಎಂದು ಹೆತ್ತವರು ಹೇಳುವುದು ಸರಿಯಲ್ಲ. ಆದರೆ, ಮಕ್ಕಳು ಹದ್ದು ಮೀರಿದಾಗ ಶಿಕ್ಷಿಸುವುದು ಅನಿವಾರ್ಯ. ಹೀಗಾಗಿ ಆರೋಪಿಗೆ ತಪ್ಪು ಮನವರಿಕೆ ಮಾಡಿಕೊಡಲು ಸಾಕಷ್ಟು ಪರ್ಯಾಯ ಮಾರ್ಗಗಳಿರುವಾಗ ಕ್ರಿಮಿನಲ್ ಮಾನನಷ್ಟ ದಾವೆ ಹೂಡಲು ಸರ್ಕಾರ ಹೆಚ್ಚು ಉತ್ಸುಕವಾಗಬಾರದು. ಅಪರೂಪದ ಪ್ರಕರಣಗಳಲ್ಲಷ್ಟೆ ಅವುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಮಾಧ್ಯಮವೂ ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲ ರಂಗಗಳಲ್ಲಿ ನೈತಿಕ ಅಧಃಪತನವಾಗುತ್ತಿದೆ. ಅದನ್ನು ಆದಷ್ಟು ಬೇಗ ಸರಿಪಡಿಸದಿದ್ದರೆ ಕ್ರಿಯಾಶೀಲ ಪ್ರಜಾಪ್ರಭುತ್ವಕ್ಕೇ ಕುತ್ತು ಬರಬಹುದು ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು. ಜಯಲಲಿತಾ 2012-13ರಲ್ಲಿ ಮುಖ್ಯ ಮಂತ್ರಿಯಾಗಿದ್ದಾಗ ಹಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ಹೂಡಿದ್ದ ಮಾನ ನಷ್ಟ ಮೊಕದ್ದಮೆಗಳನ್ನು ವಜಾ ಮಾಡುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net