

ದಾವಣಗೆರೆ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಇಂದು ವಜಾಗೊಂಡಿದ್ದು, ಬಂಧನದ ಭೀತಿಗೆ ಒಳಗಾಗಿರುವ ಮಾಡಾಳ್ ತಲೆಮರೆಸಿಕೊಂಡಿದ್ದಾರೆ. ಮತ್ತೊಂದೆಡೆ ಮಾಡಾಳ್ ಮನೆಗೆ ಲೋಕಾಯುಕ್ತ ಪೊಲೀಸರು ಪರಿಶೀಲನೆಗೆ ತೆರಳಿದ್ದು, ಹಿರಿಯ ಅಧಿಕಾರಿಗಳ ಅಪ್ಪಣೆ ಮೇರೆಗೆ ವಾಪಸ್ ತೆರಳಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಅವರ ಚನ್ನೇಶಪುರ ನಿವಾಸಕ್ಕೆ ಲೋಕಾಯುಕ್ತ ಪೊಲೀಸರು ಎರಡು ಪ್ರತ್ಯೇಕ ವಾಹನದಲ್ಲಿ ಆಗಮಿಸಿದ್ದರು. ಒಂದು ಗಂಟೆಗೂ ಹೆಚ್ಚು ಕಾಲದಿಂದ ಲೋಕಾಯುಕ್ತ ಪೊಲೀಸರು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸಿದ್ದರು. ದಾವಣಗೆರೆ ಲೋಕಾಯುಕ್ತ ಡಿವೈಎಸ್ಪಿ ರಾಮಕೃಷ್ಣ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಬಳಿಕ ಹಿರಿಯ ಅಧಿಕಾರಿಗಳ ಅಪ್ಪಣೆ ಮೇರೆಗೆ ಅವರೆಲ್ಲ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಪರಾರಿಯಾಗಿ ತಲೆಮರೆಸಿಕೊಂಡಿರುವ ಮಾಡಾಳ್ ಸದ್ಯದಲ್ಲೇ ಲೋಕಾಯುಕ್ತ ಪೊಲೀಸರಿಗೆ ಶರಣಾಗಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಏಕೆಂದರೆ ಲೋಕಾಯುಕ್ತ ಪೊಲೀಸರಿಗೆ ಶರಣಾಗುವುದಾಗಿ ಮಾಡಾಳ್ ಮನೆಯವರ ಬಳಿ ಹೇಳಿ ಹೋಗಿದ್ದಾರೆ ಎನ್ನಲಾಗಿದೆ.
ಪ್ಪ