

ಪಂಕಜ ಕೆ.ಎಂ.
ಬೆಂಗಳೂರು: ಮಾಂಡೌಸ್ ಚಂಡಮಾರುತದಿಂದಾಗಿ ಹವಾಮಾನದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಜ್ವರ, ಉಸಿರಾಟದ ತೊಂದರೆ ಸೇರಿದಂತೆ ಶೀತಸಂಬಂಧಿ ಆರೋಗ್ಯ ಸಮಸ್ಯೆಗಳು ದಿಢೀರ್ ಏರಿಕೆ ಕಂಡಿದ್ದು, ಮಕ್ಕಳಲ್ಲಿ ಬ್ರಾಂಕೋಲೈಟಿಸ್ (ಕಿರಿದಾದ ಶ್ವಾಸಕೋಶ ನಾಳಗಳಲ್ಲಿ ಉರಿಯೂತ) ಹಾಗೂ ವೈರಲ್ ಬ್ರಾಂಕೋ ನ್ಯೂಮೊನಿಯಾದಂತಹ ಸಮಸ್ಯೆಗಳು ತೀವ್ರ ಹೆಚ್ಚಳವಾಗಿವೆ. ಚಳಿ ಗಾಲದಿಂದಾಗಿ ಕಳೆದ ಹದಿನೈದು ದಿನಗಳಿಂದ ರಾಜ್ಯಾದ್ಯಂತ ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಶೇ.40 ಹೆಚ್ಚಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಬ್ರಾಂಕೋಲೈಟಿಸ್ ಹಾಗೂ ವೈರಲ್ ಬ್ರಾಂಕೋ ನ್ಯೂಮೊನಿಯಾ ಸಮಸ್ಯೆಯೊಂದಿಗೆ ನಿತ್ಯ 10-15 ಮಕ್ಕಳು, ವಾಣಿವಿಲಾಸ ಆಸ್ಪತ್ರೆಯಲ್ಲಿ 5-10, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 5-10 ಮಕ್ಕಳು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಚಂಡಮಾರುತದಿಂದ ವಾತಾವರಣದಲ್ಲಿ ಶೀತಗಾಳಿ ಹೆಚ್ಚಿದ್ದು, ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ವೈರಾಣು ಸೋಂಕು ಹೆಚ್ಚಳಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಬ್ರಾಂಕೋಲೈಟಿಸ್ ಸಮಸ್ಯೆ
ಬ್ರಾಂಕೋಲೈಟಿಸ್ ಎಂದರೆ ಕಿರಿದಾದ ಶ್ವಾಸಕೋಶದ ನಾಳಗಳಲ್ಲಿ ಉರಿಯೂತ ಉಂಟಾಗುವುದು. ರೆಸ್ಪಿರೇಟರಿ ಸಿನ್ಪೀಶಿಯಲ್ ವೈರಸ್ನಿಂದ (ಆರ್ಎಸ್ವಿ) ಈ ಸೋಂಕು ಕಾಣಿಸಿಕೊಳ್ಳುತ್ತದೆ. ಇದು ಕೇವಲ ಶ್ವಾಸಕೋಶವನ್ನು ಬಾಧಿಸುವ ವೈರಸ್ ಆಗಿದ್ದು, ನವಜಾತ ಶಿಶುಗಳಲ್ಲಿ (1 ವರ್ಷದೊಳಗಿನ ಮಕ್ಕಳು) ಹೆಚ್ಚು ಕಾಣಿಸಿ ಕೊಳ್ಳುತ್ತದೆ. ಇದರಿಂದ ಉಸಿರಾಟದಲ್ಲಿ ಏರುಪೇರು, ಉಬ್ಬಸ, ದೇಹಕ್ಕೆ ಆಮ್ಲಜನಕದ ಪೂರೈಕೆಯಲ್ಲಿ ತೊಂದರೆ, ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಸಾಧಾರಣ ಜ್ವರ ಮತ್ತು ನೆಗಡಿ ಸಮಸ್ಯೆ ಆಗುತ್ತದೆ. ಗಂಭೀರ ಹಂತದಲ್ಲಿ ಮಗು ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಈ ಸಮಸ್ಯೆಗಳಿಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವ ಅನಿವಾರ್ಯತೆ ಹೆಚ್ಚಾಗಿರುತ್ತದೆ.
ತೀವ್ರತರ ರೋಗ ಲಕ್ಷಣಗಳು
ನಿರಂತರ ಜ್ವರ, ಕೆಮ್ಮು, ನೆಗಡಿಯ ಜತೆಗೆ ಮಗುವಿನ ಮೈಬಣ್ಣ ನೀಲಿ ಆಗುವುದು, ತಾಯಿ ಹಾಲು ಸೇರಿ ಆಹಾರ ಸೇವನೆ ನಿಲ್ಲಿಸು ವುದು, ಉಬ್ಬಸ, ಪಕ್ಕೆಗಳಲ್ಲಿ ಎಳೆತ, ಉಸಿರಾಟ ವೇಗವಾಗುವುದು, ವಾಂತಿ, ನಿತ್ರಾಣಗೊಳ್ಳುವುದು, ಪ್ರಜ್ಞೆ ಕಳೆದುಕೊಳ್ಳುವುದು ಇವುಗಳಲ್ಲಿ ಯಾವುದಾದರೂ ಒಂದು ಲಕ್ಷಣ ಕಂಡುಬಂದರೂ ನಿರ್ಲಕ್ಷಿಸದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಬೇಕು.
ಎಚ್ಚರಿಕೆ ಕ್ರಮಗಳು
ವೈರಲ್ ಬ್ರಾಂಕೋ ನ್ಯುಮೋನಿಯಾ
ವೈರಲ್ ಬ್ರಾಂಕೋ ನ್ಯುಮೋನಿಯಾದಿಂದಾಗಿ (ಶ್ವಾಸಕೋಶ ಗಟ್ಟಿಯಾಗುವುದು) ಮಕ್ಕಳಿಗೆ ಉಸಿರಾಡಲು ತುಂಬಾ ಕಷ್ಟವಾಗುತ್ತದೆ. ಇದು 7 ವರ್ಷದವರೆಗಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ. ಆರ್ಎಸ್ವಿ ವೈರಾಣುವಿನ ಜತೆಗೆ ಇನ್ಫ್ಲೂಯೆಂಜಾ ಸೇರಿ ಇತರೆ ವೈರಾಣುಗಳಿಂದ ಕಾಣಿಸಿಕೊಳ್ಳುತ್ತದೆ. ಇದರಿಂದ ಮಕ್ಕಳು ಆಸ್ಪತ್ರೆಯಲ್ಲಿ ಆಮ್ಲಜನಕ ಸಂಪರ್ಕ ಪಡೆಯಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.
ಶೀತಕಾಲದಲ್ಲಿ ಮಕ್ಕಳಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚು ಬಾಧಿಸುತ್ತವೆ. ಹೀಗಾಗಿ ಗೂರಲು ಸಮಸ್ಯೆ ಹಾಗೂ ಗುರುತರ ಕಾಯಿಲೆ ಇರುವ ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾದರೂ ವೈದ್ಯರಲ್ಲಿ ತೋರಿಸಬೇಕು.
| ಡಾ.ನಿಜಗುಣ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಮಕ್ಕಳ ತಜ್ಞ