

ಬೆಂಗಳೂರು: ಪೂರ್ವ ವಲಯದ ಹೆಬ್ಬಾಳ ಹಾಗೂ ವಿಶ್ವನಾಥ ನಾಗೇನಹಳ್ಳಿ ವಾರ್ಡ್ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಬುಧವಾರ ಭೇಟಿ ನೀಡಿ ಆಹಾರ ಗುಣಮಟ್ಟ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕ್ಯಾಂಟೀನ್‌ಗಳ ದುರಸ್ಥಿ ಕಾರ್ಯ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಹೆಬ್ಬಾಳ ವಾರ್ಡ್‌ನ ಬಳ್ಳಾರಿ ಮುಖ್ಯ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಬುಧವಾರ ಭೇಟಿ ನೀಡಿ ಕ್ಯಾಂಟೀನ್ ನಿರ್ವಹಣೆ, ಆಹಾರದ ಗುಣಮಟ್ಟ ಪರಿಶೀಲಿಸಿದರು. ಈ ವೇಳೆ ಕ್ಯಾಂಟೀನ್‌ನಲ್ಲಿ ದುರಸ್ಥಿಯಲ್ಲಿದ್ದ ಬಲ್ಬ್, ಕೈ ತೊಳೆಯುವ ನೀರಿನ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಬೇಕು. ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಗೃಹ ತೆರೆಯುವಂತೆ ತುಷಾರ್ ಗಿರಿನಾಥ್, ಸಿಬ್ಬಂದಿಗೆ ತಾಕೀತು ಮಾಡಿದರು.
ತಪಾಸಣೆ ವೇಳೆ ಸಾರ್ವಜನಿಕರ ಬಳಿ ತಿಂಡಿಯ ಗುಣಮಟ್ಟ ವಿಚಾರಿಸಿದಾಗ, ಪ್ರತಿ ನಿತ್ಯ ಅಕ್ಕಿಯಿಂದ ತಯಾರಿಸಿದ ಆಹಾರ ಮಾತ್ರ ಲಭ್ಯವಾಗುತ್ತಿದ್ದು, ಅದನ್ನು ಬದಲಿಸಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಕ್ಯಾಂಟೀನ್‌ಗಳಲ್ಲಿ ನೀಡುವ ಆಹಾರದ ಮೆನು ಶೀಘ್ರ ಬದಲಾಗಲಿದೆ. ದಿನ ನಿತ್ಯ ಬಗೆ ಬಗೆಯ ತಿಂಡಿ, ಊಟ ಇರಲಿದೆ ಎಂದರು. ಮಾರ್ಷಲ್‌ಗಳು ಬರೀ ಕ್ಯಾಂಟೀನ್ ನೋಡಿಕೊಳ್ಳುವುದು ಮಾತ್ರವಲ್ಲದೇ ಬೇರೆ ಜವಾಬ್ದಾರಿಗಳನ್ನೂ ನೀಡುವಂತೆ ವಲಯ ಜಂಟಿ ಆಯುಕ್ತರಿಗೆ ಸೂಚಿಸಿದರು. ಆಹಾರದ ಗುಣಮಟ್ಟ, ಹೆಚ್ಚು ಹಣ ಪಡೆಯುವ ಬಗ್ಗೆ ಉಚಿತ ಸಹಾಯವಾಣಿ 1533ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ನಂತರ, ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಹಾಳಾಗಿರುವ ಕ್ಯಾಂಟೀನ್ ನಾಮ ಫಲಕ ಬದಲಿಸುವುದು ಸೇರಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ವಲಯ ಜಂಟಿ ಆಯುಕ್ತೆ ಪಲ್ಲವಿ, ಪ್ರಧಾನ ಅಭಿಯಂತರ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರ ಸುಗುಣಾ ಸೇರಿ ಮತ್ತಿತರರಿದ್ದರು.