ಮನೆ ಛಾವಣಿ ಸೀಳಿಕೊಂಡು ಆಕಾಶದಿಂದ ಬಿತ್ತು ನಿಗೂಢ ವಸ್ತು! ಒಂದೇ ರಾತ್ರಿಯಲ್ಲಿ ಬಡವ ಕೋಟ್ಯಧೀಶನಾಗಿಬಿಟ್ಟ | Luck

Luck
Published on

Luck : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಅದೇ ರೀತಿ ಬೆಲೆ ಬಾಳುವ ವಸ್ತುಗಳು ಸಿಕ್ಕಿ ಶ್ರೀಮಂತರಾಗಿರುವವರನ್ನು ಕಂಡಿದ್ದೇವೆ. ಅಂಥದ್ದೇ ಒಂದು ಘಟನೆಯನ್ನು ನಾವಿಂದು ನಿಮಗೆ ನೆನಪಿಸುತ್ತೇವೆ.

ನಿಗೂಢ ವಸ್ತುವೊಂದು ಆಗಸದಿಂದ ವ್ಯಕ್ತಿಯೊಬ್ಬನ ಮನೆಯ ಛಾವಣಿಯನ್ನು ಸೀಳಿಕೊಂಡು ಕೆಳಗೆ ಬೀಳುತ್ತದೆ. ಆ ವಸ್ತು ಏನೆಂದು ಆತನಿಗೆ ತಕ್ಷಣಕ್ಕೆ ಅರ್ಥವಾಗುವುದಿಲ್ಲ? ಆದರೆ ಆನಂತರ ಅದರ ಬಗ್ಗೆ ತಿಳಿದಾಗ ಆತನಿಗೆ ನಿಜಕ್ಕೂ ನಂಬಲಾಗಲಿಲ್ಲ. ಏಕೆಂದರೆ, ಅದು ಬೆಲೆ ಬಾಳುವ ವಸ್ತುವಾಗಿತ್ತು. ಒಂದೇ ರಾತ್ರಿಯಲ್ಲಿ ಆ ವಸ್ತುವಿನಿಂದ ಆತ ಕೋಟ್ಯಧಿಪತಿ ಆಗಿದ್ದಾನೆ. ಇಂದು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾನೆ.

ಅಂದಹಾಗೆ ಆ ಅದೃಷ್ಟವಂತನ ಹೆಸರು ಜೋಶುವಾ ಹುಟಗಲುಂಗ್. ಈತ ಇಂಡೋನೇಷ್ಯಾದ ಕೊಲಾಂಗ್ ನಿವಾಸಿ. ಈ ಘಟನೆ ನಡೆದಿದ್ದು 2020ರಲ್ಲಿ. ಹುಟಗಲುಂಗ್ ಮನೆಯ ಹೊರಗೆ ಕೆಲಸ ಮಾಡುತ್ತಿದ್ದಾಗ, ಅವರ ಲಿವಿಂಗ್ ರೂಮ್ ಬಳಿ ಉಲ್ಕಾಶಿಲೆಯ ಒಂದು ಭಾಗ ಬಿದ್ದಿತು. ಅದು ಎಷ್ಟು ವೇಗವಾಗಿ ನೆಲಕ್ಕೆ ಅಪ್ಪಳಿಸಿತು ಅಂದರೆ, ಮನೆಯ ಛಾವಣಿಯನ್ನು ಸೀಳಿಕೊಂಡು ನೆಲಕ್ಕೆ ಬಿದ್ದ ರಭಸಕ್ಕೆ ಆ ಜಾಗದಲ್ಲಿ 15 ಸೆಂ.ಮೀ ಆಳದ ಕುಳಿ ರೂಪುಗೊಂಡಿತು. ಅದನ್ನು ನೋಡಿ ಹುಟಗಲುಂಗ್​ ಒಂದು ಕ್ಷಣ ಆಘಾತಕ್ಕೆ ಒಳಗಾದರು. ಏನಿದು ನಿಗೂಢ ವಸ್ತು ಎಂಬ ಯೋಚನೆ ಮಾಡತೊಡಗಿದರು. ತನಿಖೆ ನಡೆಸಿದಾಗ ಅದೊಂದು ಉಲ್ಕಾಶಿಲೆಯಾಗಿದ್ದು, 4.5 ಶತಕೋಟಿ ವರ್ಷಗಳಷ್ಟು ಹಳೆಯದು ಎಂಬುದು ಗೊತ್ತಾಯಿತು. ಆ ಉಲ್ಕಾಶಿಲೆಯ ಭಾಗ 2.1 ಕೆಜಿ ತೂಕವಿತ್ತು. ಅತ್ಯಂತ ಅಚ್ಚರಿಯ ಸಂಗತಿ ಎಂದರೆ ಆ ಉಲ್ಕಾಶಿಲೆ ತುಣುಕು ಬರೋಬ್ಬರಿ 14 ಕೋಟಿ ರೂಪಾಯಿ ಬೆಲೆ ಬಾಳುತ್ತಿತ್ತು.

ಉಲ್ಕಾಶಿಲೆಯನ್ನು ಬಹಳ ಅಪರೂಪದ CM1/2 ಕಾರ್ಬೊನೇಸಿಯಸ್ ಕಾಂಡ್ರೈಟ್ ಎಂದು ಗುರುತಿಸಲಾಗಿದೆ. ಇದು ವಿಶೇಷ ರೀತಿಯ ಉಲ್ಕಾಶಿಲೆಯಾಗಿದೆ. ಪರಿಣಿತರು ಈ ಉಲ್ಕಾಶಿಲೆಯನ್ನು ಹುಟಗಲುಂಗ್‌ನಿಂದ ಖರೀದಿಸಿದರು. ಹುಟಗಲುಂಗ್ ಈಗ ಮಿಲಿಯನೇರ್ ಆಗಿದ್ದಾರೆ. ಕಡುಬಡತನದಲ್ಲಿ ಬೆಳೆದ ಹುಟಗಲುಂಗ್​ ಇಂದು ಶ್ರೀಮಂತಿಕೆಯ ಸವಿ ಸವಿಯುತ್ತಿದ್ದಾನೆ.

ಅಂದಹಾಗೆ ಉಲ್ಕಾಶಿಲೆಯ ತುಣುಕನ್ನು ಅಮೆರಿಕದ ಉಲ್ಕಾಶಿಯ ತಜ್ಞ ಜೇರೆಡ್ ಕಾಲಿನ್ಸ್ ಎಂಬುವರು ಖರೀದಿಸಿದರು. 2020ರಲ್ಲಿ ಈ ಪ್ರಕರಣ ಭಾರಿ ಸುದ್ದಿಯಾಗಿತ್ತು. ನಮಗ್ಯಾಕೆ ಇಂಥಾ ಅದೃಷ್ಟ ಬರುವುದಿಲ್ಲ ಎಂದು ಜನರು ಮಾತನಾಡಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net