ರಸ್ತೆ ಬದಿ ಕಾರಿನೊಳಗೆ ಲವರ್ಸ್ ಕಾಮದಾಟ​: ಬುದ್ಧಿ ಹೇಳಲು ಹೋದ SI ಮೇಲೆ ಕಾರು ಹರಿಸಲು ಯತ್ನ

BNG Police
Published on

ಬೆಂಗಳೂರು: ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಯುವಕ-ಯುವತಿಗೆ ಬುದ್ಧಿವಾದ ಹೇಳಲು ಹೋದ ಸಬ್​ ಇನ್ಸ್​ಪೆಕ್ಟರ್​ ಮೇಲೆಯೇ ಖತರ್ನಾಕ್​ ಜೋಡಿ ಕಾರು ಹರಿಸಲು ಯತ್ನಿಸಿ, ಪರಾರಿಯಾದ ಘಟನೆ ನಗರದ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆ ಜ.20ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾರ್ಕ್​​ ಬಳಿ ಮಟ ಮಟ ಮಧ್ಯಾಹ್ನವೇ ಯುವಕ-ಯುವತಿ ಕಾರಿನ ಒಳಗಡೆ ಕಾಮಕೇಳಿ ಆರಂಭಿಸಿದ್ದರು. ಈ ವೇಳೆ ಪಾರ್ಕಿನಲ್ಲಿ ಸಾಕಷ್ಟು ಜನರಿದ್ದರು. ತಮ್ಮ ಅಶ್ಲೀಲ ವರ್ತನೆ ಅದಲ್ಲಿದ್ದವರಿಗೆ ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೇ ಜೋಡಿ ಮೈಮರೆತಿದ್ದರು.

ಜೋಡಿ ಮೈಮರೆತಿರುವುದನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಸಬ್​ ಇನ್ಸ್​ಪೆಕ್ಟರ್​ ಮಹೇಶ್​ ಅವರು ಗಮನಿಸಿದ್ದು, ಇಬ್ಬರಿಗೂ ಬುದ್ಧಿವಾದ ಹೇಳಲೆಂದು ಕಾರಿನ ಬಳಿ ಹೋಗಿದ್ದಾರೆ. ಮೊದಲು ಕಾರಿನ ನಂಬರ್​ ಅನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಹೇಶ್​ರನ್ನು ನೋಡಿ ಜೋಡಿ, ಭಯಬಿದ್ದು ತಮ್ಮ ಅಸ್ತವ್ಯಸ್ತಗೊಂಡಿದ್ದ ತಮ್ಮ ಬಟ್ಟೆಗಳನ್ನು ಸರಿಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಪರಾರಿಯಾಗುವ ಸಮಯದಲ್ಲಿ ಎಸ್​ಐ ಮಹೇಶ್​ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಮಹೇಶ್​ ಅವರು ಕಾರಿನ ಬಾನೆಟ್​ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ, ಕಾರು ಚಲಾಯಿಸಿದ್ದಾನೆ. ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಮತ್ತೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಎಸ್​ಐ ಕೆಳಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಎಸ್​ಐ ಮಹೇಶ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net