

ಕಾನ್ಪುರ: ಮಗಳು ಪ್ರೀತಿ ಮಾಡಿದಳು ಎನ್ನುವ ಕಾರಣಕ್ಕೆ ತಂದೆ ಆಕೆಯನ್ನು ಮತ್ತೆ ಆಕೆಯ ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಕಾನ್ಪುರದಲ್ಲಿ ನಡೆದಿದೆ. ಪ್ರಿಯಕರನ ತಂದೆಯ ಎದುರಲ್ಲೇ ಕೊಲೆ ನಡೆದಿರುವುದಾಗಿ ಹೇಳಲಾಗಿದೆ.
ಕಾನ್ಪುರದ ಘಟಂಪೂರ್ನಲ್ಲಿ ಇಂತಹ ಘಟನೆ ನಡೆದಿದೆ. ವಿರ್ಹಾನ್ಪುರ್ ಮೂಲದ ಯುವತಿ ಘಟಂಪೂರ್ನಲ್ಲಿ ವಾಸವಿದ್ದಳು. ಅದೇ ಗ್ರಾಮದ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಈ ವಿಚಾರ ಯುವಕನ ಕುಟುಂಬದ ಜತೆ ಪೂರ್ತಿ ಗ್ರಾಮಕ್ಕೆ ಗೊತ್ತಿತ್ತು. ಆದರೆ ಯುವತಿಯ ತಂದೆಗೆ ವಿಚಾರ ಗೊತ್ತಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಪ್ರೀತಿಯನ್ನು ನಿಲ್ಲಿಸುವಂತೆ ಎಚ್ಚರಿಸಿದ್ದ. ಯುವತಿ ಅಪ್ಪನ ಮಾತು ಕೇಳದೆ ಪ್ರೀತಿ ಮುಂದುವರಿಸಿದ್ದಳು.
ಗುರುವಾರ ಬೆಳಗ್ಗೆ ಯುವಕ ಯುವತಿಯಿದ್ದ ಮನೆಗೆ ಬಂದಿದ್ದಾನೆ. ಈ ವಿಚಾರವನ್ನು ಯಾರೋ ಯುವತಿಯ ತಂದೆಗೆ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಯುವತಿಯ ತಂದೆ ಮತ್ತು ಆಕೆಯ ಸಹೋದರರು, ಮನೆ ಒಳಗೆ ನುಗ್ಗಿ ಒಳಗಿನಿಂದ ಬಾಗಿಲು ಹಾಕಿಕೊಂಡು ಪ್ರೇಮಿಗಳಿಗೆ ಹೊಡೆಯಲಾರಂಭಿಸಿದ್ದಾರೆ. ಕೂಗಾಟ ಕೇಳಿ ಯುವಕನ ತಂದೆಯೂ ಸ್ಥಳಕ್ಕೆ ಬಂದಿದ್ದಾನೆ. ಆತ ಎಷ್ಟೇ ಕೇಳಿಕೊಂಡರೂ ಬಾಗಿಲು ತೆಗೆಯದ ಯುವತಿಯ ತಂದೆ ಇಬ್ಬರ ಪ್ರಾಣವನ್ನು ತೆಗೆದು ಅಲ್ಲಿಂದ ಪರಾರಿಯಾಗಿದ್ದಾನೆ. ಆತನ ಜತೆ ಯುವತಿಯ ಸಹೋದರರೂ ಪರಾರಿಯಾಗಿದ್ದಾರೆ.
ಸದ್ಯ ಈ ವಿಚಾರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)