

ಹೈದರಾಬಾದ್: ಕಳೆದ ಮಂಗಳವಾರ ನಡೆದಿದ್ದ ಭೀಕರ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತೆಲಂಗಾಣದಲ್ಲಿ ಚೋಟು ಉಪ್ಪಲ್ ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಬ್ರೆಕ್ ಫೇಲ್ ಆಗಿ ಬಂದ ಕಾರೊಂದು ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು.
ಅಪಘಾತದ ವೇಳೆ ಬೈಕ್ನಿಂದ ಪೆಟ್ರೋಲ್ ಹೊರಬಿದ್ದ ಕಾರಣ ನಡುರಸ್ತೆಯಲ್ಲೇ ಬೈಕ್ ಹೊತ್ತಿ ಉರಿದಿತ್ತು. ಸುಮಾರು ನಾಲ್ಕು ಬೈಕ್ಗಳಿಗೆ ಕಾರು ಡಿಕ್ಕಿ ಹೊಡೆದಿತ್ತು. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಇಬ್ಬರ ದಾರುಣ ಸಾವಿಗೀಡಾಗಿದ್ದರು.
ಮೃತ ಇಬ್ಬರು ಸಹ ಪ್ರೇಮಿಗಳು ಎಂಬುದೇ ಮನಕಲಕುವ ಸಂಗತಿ. ಚೋಟು ಉಪ್ಪಲ್ ಸಮೀಪದ ಟ್ಯಾಂಕ್ ಬಂದ್ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಲು ಪ್ರೇಮಿಗಳು ತೆರಳುತ್ತಿದ್ದರು. ದುರಾದೃಷ್ಟವಶಾತ್ ಜವರಾಯನ ಅಟ್ಟಹಾಸದಿಂದಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟರೆ, ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಅವರು ತೆರಳುತ್ತಿದ್ದ ಸ್ಕೂಟಿಯೂ ಸಹ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.
ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್)