ಪ್ರೇಯಸಿ ಜತೆ ಚಕ್ಕಂದ ಆಡುವುದನ್ನು ಕಂಡ 6 ವರ್ಷದ ಬಾಲಕನನ್ನು ಕೊಂದ ಪ್ರೇಮಿ

crime
Published on

ಬರೇಲಿ: ತನ್ನ ಅಪ್ರಾಪ್ತ ವಯಸ್ಸಿನ ಗರ್ಲ್​ಫ್ರೆಂಡ್​ ಜತೆ ಚಕ್ಕಂದ ಆಡುತ್ತಿದ್ದದ್ದನ್ನು ಕಂಡ ಎಂಬ ಕಾರಣಕ್ಕಾಗಿ ಆಕೆಯ ಬಾಯ್​ಫ್ರೆಂಡ್​, 6 ವರ್ಷದ ಬಾಲಕನನ್ನು ಕತ್ತುಹಿಸುಕಿ ಕೊಂದಿದ್ದಾನೆ. ಅಪ್ರಾಪ್ರೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಕ್ಕಾಗಿ ಆ 21 ವರ್ಷದ ಯುವಕನ ವಿರುದ್ಧ ಈಗ ಅತ್ಯಾಚಾರದ ಪ್ರಕರಣವೂ ದಾಖಲಾಗಿದೆ.

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಈದ್​ಜಾಗೀರ್​ ಎಂಬ ಗ್ರಾಮದಲ್ಲಿ ದಿನಗೂಲಿಗಳಾಗಿರುವ ದಂಪತಿಯ ಪುತ್ರ ಮೃತಪಟ್ಟವನು. ಪಾಲಕರು ಕೆಲಸಕ್ಕೆ ಹೋದ ಸಮಯದಲ್ಲಿ ಈ ದಂಪತಿಯ ಪುತ್ರಿ ಸಹೋದರನೊಂದಿಗೆ ಇರುತ್ತಿದ್ದಳು. ಕೆಲದಿನಗಳ ಹಿಂದೆ ಈಕೆ 21 ವರ್ಷದ ಯುವಕನನ್ನು ಲವ್​ ಮಾಡಲಾರಂಭಿಸಿದ್ದಳು. ಈಕೆಯ ಪಾಲಕರು ಇಲ್ಲದ ಸಮಯದಲ್ಲಿ ಆತ ಇವರ ಮನೆಗೆ ಬಂದು ಹೋಗುತ್ತಿದ್ದ.

ಅದೊಂದು ದಿನ ತಮ್ಮನನ್ನು ಆಟವಾಡಲು ಹೊರಗೆ ಕಳುಹಿಸಿದ ಬಾಲಕಿ ತನ್ನ ಪ್ರೇಮಿಯನ್ನು ಕರೆಯಿಸಿಕೊಂಡು ಚಕ್ಕಂದ ಆಡತೊಡಗಿದ್ದಳು. ಅದೇ ಸಮಯಕ್ಕೆ ಬಾಲಕ ನೀರು ಕುಡಿಯಲೆಂದು ಮನೆಗೆ ಬಂದಿದ್ದ. ಆಗ ತನ್ನ ಅಕ್ಕ ಮತ್ತು ಯುವಕ ಚಕ್ಕಂದ ಆಡುತ್ತಿರುವುದನ್ನು ಕಂಡಿದ್ದ.

ಈ ವಿಷಯವನ್ನು ಆತ ಪಾಲಕರಿಗೆ ತಿಳಿಸಿ ಬಿಡುತ್ತಾನೆ ಎಂದು ಬಾಲಕಿ ಭೀತಳಾಗಿದ್ದಳು. ಇದೇ ಭೀತಿಯಲ್ಲಿದ್ದ ಯುವಕ ಬಾಲಕನನ್ನು ಹಿಡಿದು ಆತನ ಕತ್ತುಹಿಸುಕಿ ಸಾಯಿಸಿ ಹೊರಟು ಹೋಗಿದ್ದ. ಸಂಜೆ ಮನೆಗೆ ಮರಳಿದ ಪಾಲಕರಿಗೆ ಬಾಲಕ ಮೇಲಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವುದಾಗಿ ಬಾಲಕಿ ತಿಳಿಸಿದ್ದಳು. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಸತ್ತಿರುವುದಾಗಿ ವೈದ್ಯರು ತಿಳಿಸಿದ್ದರು.

ಬಾಲಕಿಯ ಮಾತು ನಂಬಿದ ಪಾಲಕರು ಮತ್ತು ನೆರೆಹೊರೆಯವರು ಅಂತ್ಯಸಂಸ್ಕಾರ ನೆರವೇರಿಸಿ ಸುಮ್ಮನಾಗಿದ್ದರು. ಆದರೆ ಗುಟ್ಟನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗಲಾರಂಭಿಸಿದ್ದ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು. ಅದೊಂದು ದಿನ ತನ್ನ ಪಾಲಕರಿಗೆ ನಡೆದ ಸಂಗತಿಯನ್ನು ಹೇಳಿ, ತನ್ನ ಪ್ರೇಮಿಯೇ ಬಾಲಕನನ್ನು ಹತ್ಯೆ ಮಾಡಿದ್ದಾಗಿ ತಿಳಿಸಿದ್ದಳು.

ಅದರಂತೆ ಆಕೆಯ ಪಾಲಕರು ಯುವಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಪೊಲೀಸರು ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಕ್ಕಾಗಿ ಆತನ ವಿರುದ್ಧ ಅತ್ಯಾಚಾರದ ದೂರನ್ನೂ ದಾಖಲಿಸಿಕೊಂಡಿದ್ದಾರೆ. ಇದೀಗ ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ತಲೆಮರೆಸಿಕೊಂಡಿರುವ ಯುವಕನಿಗಾಗಿ ಶೋಧಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net