ವಿಮಾನಗಳೆರಡು ಮುಖಾಮುಖಿ ಡಿಕ್ಕಿಯಾಗಿ ಶಾಸಕ ಸೇರಿದಂತೆ ಏಳು ಮಂದಿ ದುರ್ಮರಣ

Flight Crash
Published on

ಆಂಕಾರೇಜ್ (ಅಲಾಸ್ಕ): ಎರಡು ವಿಮಾನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಶಾಸಕ ಸೇರಿದಂತೆ ಒಟ್ಟು ಏಳು ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಅಮೆರಿಕದ ಅಲಾಸ್ಕ ನಗರದಲ್ಲಿ ಶುಕ್ರವಾರ ನಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಲಾಸ್ಕದ ಕೆನೈ ಪೆನಿನ್ಸುಲಾದ ಸೋಲ್ಡೊಟ್ನಾ ನಗರದ ವಿಮಾನ ನಿಲ್ದಾಣದ ಸಮೀಪದಲ್ಲಿ ಸಂಭವಿಸಿದ ವಿಮಾನಗಳ ಪತನದಲ್ಲಿ ಯಾರೊಬ್ಬರು ಸಹ ಉಳಿದಿಲ್ಲ. ಇದೇ ಏರಿಯಾವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಗ್ಯಾರಿ ನೂಪ್​ ವಿಮಾನವೊಂದರಲ್ಲಿ ಏಕಾಂಗಿಯಾಗಿ ಬರುತ್ತಿದ್ದರು. ಮತ್ತೊಂದು ವಿಮಾನವು ಸೌಥ್​ ಕರೊಲಿನಾದಿಂದ ಅಲಾಸ್ಕ ಕಡೆಗೆ ಬರುತ್ತಿತ್ತು. ಅದರಲ್ಲಿ 4 ಪ್ರವಾಸಿಗರು, ಓರ್ವ ಗೈಡ್​ ಹಾಗೂ ಪೈಲಟ್​ ಇದ್ದರು.

ಈ ವೇಳೆ ವಾಯು ಮಾರ್ಗ ಮಧ್ಯದಲ್ಲಿ ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರ ಪರಿಣಾಮ ಒಟ್ಟು ಏಳು ಮಂದಿಯೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಲ್ಲಿ ಓರ್ವ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ. ಇನ್ನು ಪತನಗೊಂಡ ವಿಮಾನದ ಅವಶೇಷಗಳು ಹೆದ್ದಾರಿ ಮೇಲೆಯೇ ಬಿದ್ದಿವೆ.

ಅಂದಹಾಗೆ ಶಾಸಕ ಗ್ಯಾರಿ ನೂಪ್​ ಓರ್ವ ರಿಪಬ್ಲಿಕನ್ ಮತ್ತು ರಾಜ್ಯ ಸದನದ ಉಭಯಪಕ್ಷೀಯ ಬಹುಮತದ ಸದಸ್ಯರಾಗಿದ್ದರು. ಅನೇಕ ಸಹೋದ್ಯೋಗಿಗಳು ನೂಪ್​ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಲ್ಲದೆ, ನೂಪ್​ ಓರ್ವ ದಯೆಯುಳ್ಳ ನಾಯಕ. ನಿಜವಾದ ಅಲಾಸ್ಕನ್​ ಆಗಿದ್ದು, ನಿರಂತರವಾಗಿ ದಣಿವರಿಯಿಲ್ಲದೆ ತನ್ನ ಏರಿಯಾದ ಏಳಿಗೆಗಾಗಿ ಶ್ರಮಿಸುತ್ತಿದ್ದರು. ಇಂದು ಅವರನ್ನು ಎಲ್ಲರು ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದು ಸಹೋದ್ಯೋಗಿಗಳು ಸ್ಮರಿಸಿಕೊಂಡಿದ್ದಾರೆ.

ಇತರೆ ಸಂತ್ರಸ್ತರನ್ನು ಪೈಲಟ್​ ಗ್ರೆಗೋರಿ ಬೆಲ್​ (67), ಗೈಡ್​ ಡೇವಿಡ್​​ ರೋಜರ್ಸ್​ (40) ಮತ್ತು ಸೌಥ್​ ಕರೊಲಿನಾ ಪ್ರವಾಸಿಗರಾದ ಕಲೆಬ್​ ಹಸ್ಲಿ (26), ಹೆದರ್​ ಹಸ್ಲಿ (25), ಮೆಕಾಯ್​ ಹಸ್ಲಿ (24) ಮತ್ತು ಕ್ರಿಸ್ಟಿ ರೈಟ್​ (23) ಎಂದು ಗುರುತಿಸಲಾಗಿದೆ.

ಸದ್ಯ ಈ ಪ್ರಕರಣ ತನಿಖೆಗೆ ಆದೇಶಿಸಲಾಗಿದೆ. ಅಲಾಸ್ಕದಲ್ಲಿ ಕೊನೆಯಾದಾಗಿ 2019ರ ಮೇನಲ್ಲಿ ಕೆಟ್ಚಿಕನ್​ ಸಮೀಪ ವಿಮಾನಗಳ ಡಿಕ್ಕಿಯಾಗಿತ್ತು. ಈ ವೇಳೆ 6 ಮಂದಿ ಮೃತರಾಗಿದ್ದರು. 10 ಮಂದಿಯನ್ನು ರಕ್ಷಿಸಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net