ಪ್ರೇಯಸಿಯ ಜನ್ಮದಿನವೇ ಸಾವಿಗೆ ಶರಣಾದ ಕಾಲೇಜು ಯುವಕ! ದುರಂತ ಅಂತ್ಯಕ್ಕೆ ಕಾರಣವಾಯ್ತು ಆ ರಾತ್ರಿ | Suicide

love tragedy
Published on

ತೆಲಂಗಾಣ: ಪ್ರೀತಿ, ಪ್ರೇಮ ಎಲ್ಲವೂ ಪುಸ್ತಕದ ಬದನೆಕಾಯಿ ಎಂದು ಒಂದಷ್ಟು ಪ್ರೀತಿಗೆ ವಿರೋಧ ವ್ಯಕ್ತಪಡಿಸುವವರು ಹೇಳಿದರೆ, ಪ್ರೀತಿಯೇ ಜೀವನ, ಪ್ರೇಮವಿಲ್ಲದ ಕಥೆಯಿಲ್ಲ ಎಂದು ಕೆಲವು ಭಗ್ನ ಪ್ರೇಮಿಗಳು ಹೇಳುವುದು ತೀರ ಸಾಮಾನ್ಯ ಸಂಗತಿ. ಅದರಲ್ಲೂ ಈ 18ರಿಂದ 21 ವಯಸ್ಸಿನವರ ಪ್ರೇಮ ಸಂಬಂಧಗಳು ಯಾವಾಗ, ಏಕೆ, ಹೇಗೆ ಚಿಗುರೊಡೆಯುತ್ತದೆ ಎಂಬುದು ಅರ್ಥವಾಗದ ಸಂಗತಿ. ಪ್ರೀತಿ ಹೆಸರಿನಲ್ಲಿ ಮೋಸ ಹೋಗ್ತಾರೆ, ಮೋಸ ಹೋದೆ ಎಂದು ತಿಳಿದಾಗ ಹೆತ್ತವರ ತ್ಯಾಗ, ಕಷ್ಟ, ಕಣ್ಣೀರನ್ನು ಮರೆತು ದುರಂತ ಅಂತ್ಯವನ್ನು ಕಾಣುತ್ತಾರೆ (Suicide). ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಎಂದರೆ ಖಂಡಿತ ತಪ್ಪಾಗಲಾರದು.

ಪ್ರೀತಿಗಾಗಿ, ಪ್ರೀತಿಸಿದವರನ್ನು ಪಡೆದುಕೊಳ್ಳಲು ಕೆಲ ಭಗ್ನ ಪ್ರೇಮಿಗಳು, ಯಾರನ್ನು ಬೇಕಾದರೂ ಹತ್ಯೆಗೈಯಲು ರೆಡಿ, ಎಂಥ ಕೃತ್ಯ ಎಸಗಲು ತಯಾರಿ. ಒಂದು ನಿಮಿಷ ಚಿಂತಿಸಿ, ಆನಂತರ ನಿಲುವು ತೆಗೆದುಕೊಳ್ಳುವ ಮನಸ್ಥಿತಿಯನ್ನೇ ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ತಮ್ಮ ಪ್ರೇಮಕ್ಕಾಗಿ ತ್ಯಾಗಕ್ಕೂ ಸಿದ್ಧ, ಸಾವಿಗೂ ಬದ್ಧ ಎನ್ನುತ್ತಾರೆ ಇಂದಿನ ಯುವಜನತೆ. ಪ್ರೀತಿಯ ಅಮಲಿನಲ್ಲಿ ಬೀಳುವ ಹುಡುಗ-ಹುಡುಗಿಯರು ಚೌಕಟ್ಟುಗಳನ್ನು ಮೀರಿ, ಪ್ರೇಮದ ಬಲೆಯಲ್ಲಿ ಸಿಲುಕಿ, ಇಂದು ಪೋಷಕರ ಆಕ್ರಂದನಕ್ಕೆ ಕಾರಣವಾಗುತ್ತಿರುವುದು ತೀರ ಶೋಚನೀಯ. ಇಂತಹದ್ದೇ ಘಟನೆಯೊಂದು ಈ ಊರಿನಲ್ಲಿ ನಡೆದಿದ್ದು, ತನ್ನ ಪ್ರಿಯತಮೆಯ ಜನ್ಮದಿನದಂದೇ ಇಲ್ಲೊಬ್ಬ ಅಮರ ಪ್ರೇಮಿ ಸಾವಿಗೆ ಶರಣಾಗಿದ್ದಾನೆ.

ಮದುವೆ ಒಪ್ಪಂದ

ಸರ್ಕಾರಿ ಜೂನಿಯರ್​ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲಪಹಾಡ್ ಗ್ರಾಮದ ಯುವಕ ರಂಜಿತ್​ಗೆ​ (19), ಅದೇ ಕಾಲೇಜಲ್ಲಿ ಓದುತ್ತಿದ್ದ ರೇಣುಕಾ ಎಂಬ ಯುವತಿಯೊಂದಿಗೆ ಪರಿಚಯವಾಗುತ್ತದೆ. ಕೆಲವೇ ದಿನಗಳಲ್ಲಿ ಈ ಪರಿಚಯ ಪ್ರೇಮಕ್ಕೆ ತಿರುಗಿ, ಒಬ್ಬರನೊಬ್ಬರು ನೋಡದೆ ಇರಲಾರದ ಪರಿಸ್ಥಿತಿಗೆ ಬರುತ್ತಾರೆ. ಇದು ಪ್ರೀತಿ ಎಂಬುದನ್ನು ಅರಿತುಕೊಂಡ ಇಬ್ಬರು, ಆಗಾಗ್ಗೆ ಭೇಟಿಯಾಗುತ್ತಿರುತ್ತಾರೆ. ಇದೇ ವೇಳೆ ಮದುವೆ ಒಪ್ಪಂದಕ್ಕೆ ಬರುವ ವಿದ್ಯಾರ್ಥಿಗಳು, ತಮ್ಮ ಮನೆಯವರ ಮನವೊಲಿಸಿ ಮದುವೆಯಾಗಲು ನಿರ್ಧರಿಸುತ್ತಾರೆ. ಇನ್ನು ಭಾನುವಾರ ರೇಣುಕಾ ಹುಟ್ಟುಹಬ್ಬವಿದ್ದ ಕಾರಣ, ಶುಭಕೋರಲು ಮಧ್ಯರಾತ್ರಿಯೇ ಆಕೆಯ ಮನೆಗೆ ಹೋಗುವ ರಂಜಿತ್​, ಅಲ್ಲೊಂದು ಎಡವಟ್ಟಿಗೆ ಸಾಕ್ಷಿಯಾಗುತ್ತಾನೆ.

ಹಿಗ್ಗಾಮುಗ್ಗಾ ಥಳಿತ

ತಡರಾತ್ರಿ ಆಕೆಯನ್ನು ನೋಡಲು ಬೈಕ್​ನಲ್ಲಿ ಒಬ್ಬನೇ ರೇಣುಕ ಮನೆಯ ಬಳಿ ಹೋಗುವ ರಂಜಿತ್​, ಪ್ರೇಯಸಿಗೆ ಜನ್ಮದಿನದ ಶುಭಾಶಯ ತಿಳಿಸಿ, ಆಕೆಯೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುತ್ತಾನೆ. ಈ ವೇಳೆ ಮಗಳೊಂದಿಗೆ ರಂಜಿತ್​ನನ್ನು ಕಣ್ಣಾರೆ ಕಂಡ ಪೋಷಕರು, ಎಲ್ಲರ ಮುಂದೆಯೇ ಆತನಿಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿ, ಇನ್ಯಾವತ್ತು ಅವಳ ಸಹವಾಸಕ್ಕೆ ನೀನು ಬರಬಾರದು ಹುಷಾರ್​ ಎಂಬ ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಪ್ರಿಯತಮೆಯ ಕುಟುಂಬಸ್ಥರು ತನಗೆ ಎಲ್ಲರೆದರೂ ಹೊಡೆದು, ಮಾನ ಮಾರ್ಯದೆ ಕಳೆದರು ಎಂದು ದುಃಖದಿಂದಲೇ ಮನೆಗೆ ಹೋದ ರಂಜಿತ್​, ಗ್ರಾಮದ ಬಳಿಯಿದ್ದ ಕೆರೆಗೆ ಜಿಗಿದು, ಪ್ರಾಣ ಕಳೆದುಕೊಂಡಿದ್ದಾನೆ.

ಪುತ್ರನ ಸಾವಿಗೆ ರೇಣುಕಾ ಕಾರಣ

ಸೋಮವಾರ (ಅ.28) ಕೆರೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ರಂಜಿತ್ ಮೃತದೇಹ ಕಂಡು ಯುವಕನ ತಂದೆ ಶಂಕರಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರಂಜಿತ್ ಮೃತದೇಹವನ್ನು ಕೆರೆಯಿಂದ ಹೊರ ತೆಗೆಯಲಾಗಿದ್ದು, ಮಗ ಶವವಾಗಿ ಬಿದ್ದಿರುವುದನ್ನು ನೋಡಿ ಪೋಷಕರು ಕಣ್ಣೀರಿಟ್ಟಿದ್ದಾರೆ. ಪುತ್ರನ ಸಾವಿಗೆ ರೇಣುಕಾ ಕಾರಣ ಎಂದು ಆರೋಪಿಸಿದ ಮೃತನ ತಂದೆ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net