

ಬೆಂಗಳೂರು: ಸಿಗ್ನಲ್ ಜಂಪ್ ಮಾಡಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಸಾವನ್ನಪ್ಪಿದ್ದಾಳೆ. ಕೇರಳ ಮೂಲದ ಶಾಲಿನಿ (32) ಮೃತ ಯುವತಿ. ಲಾರಿ ಚಾಲಕ ಅಭಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಚಿನ್ನಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದ ಶಾಲಿನಿ, ತನ್ನೂರಿಗೆ ಬಸ್‌ನಲ್ಲಿ ಶನಿವಾರ ತೆರಳಲು ನಿರ್ಧರಿಸಿದ್ದರು. ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಶನಿವಾರ ಬೆಳಗಿನ ಜಾವ 4 ಗಂಟೆಗೆ ಆಟೋದಲ್ಲಿ ತೆರಳುತ್ತಿದ್ದರು. ಹೊಸೂರಿನಿಂದ ಹೆಬ್ಬಾಳಕ್ಕೆ ಕಬ್ಬಿಣ ತುಂಬಿಕೊಂಡು ಹೋಗುತ್ತಿದ್ದ ಲಾರಿ, ದಾರಿಯ ಮಧ್ಯದಲ್ಲಿ ಪೊಲೀಸ್ ತಿಮ್ಮಯ್ಯ ಜಂಕ್ಷ್‌ನಲ್ಲಿ ಸಿಗ್ನಲ್ ಜಂಪ್ ಮಾಡಿ ಮುನ್ನುಗಿ ಆಟೋಗೆ ಗುದ್ದಿದೆ.
ಆಟೋ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಶಾಲಿನಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.