ಅರ್ಧ ನಾರೀಶ್ವರ

ವಿಜಯವಾಣಿ-4-2
Published on

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು

ತಾ ಮಾಡಿದ ಹೆಣ್ಣು ತನ್ನ ಎದೆಯನ್ನೇರಿತ್ತು

ತಾ ಮಾಡಿದ ಹೆಣ್ಣು ತನ್ನ ನಾಲಿಗೆಯನ್ನೇರಿತ್ತು

ಇದು ಕಾರಣ ಹೆಣ್ಣು ಹೆಣ್ಣಲ್ಲ ಹೆಣ್ಣು

ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ...ಹೀಗೆಂದು ಹನ್ನೆರಡನೆಯ ಶತಮಾನದಲ್ಲಿ ಶ್ರೀ ಸಿದ್ಧರಾಮ ಶಿವಯೋಗಿಗಳು ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಸೃಷ್ಟಿಗೆ ಮೊದಲು ಜಗತ್ತಿನ ಉಪಾದಾನ ಕಾರಣವಾದ ಪ್ರಕೃತಿಯು ಈಶ್ವರನ ಶಕ್ತಿಯ ರೂಪದಿಂದ ಅವನಲ್ಲಿ ಅಭಿನ್ನವಾಗಿತ್ತು. ಉದಾಹರಣೆಗೆ, ಆಯಸ್ಕಾಂತದಲ್ಲಿ ಲೋಹವನ್ನು ಆಕರ್ಷಿಸುವ ಶಕ್ತಿಯಂತೆ, ಬೆಂಕಿಯಲ್ಲಿ ದಾಹಕಶಕ್ತಿಯಂತೆ, ಪರಬ್ರಹ್ಮದಲ್ಲಿ ಶಕ್ತಿ ಇತ್ತು. ಅದು ತನ್ನ ಗುಣಗಳಿಂದ ಗುಪ್ತವಾಗಿತ್ತು. ಹೀಗೆ ಪರಾಶಕ್ತಿಯು ಪರಶಿವಬ್ರಹ್ಮನಲ್ಲಿ ಅಸಾಧಾರಣ ಧರ್ಮವೆಂದು ಶ್ರುತ್ಯಾಗಮಗಳಲ್ಲಿ ಪ್ರಸಿದ್ಧವಾಗಿದೆ. ಈ ಪರಾಶಕ್ತಿಯು ತ್ರಿಮೂರ್ತಿಗಳಿಗೆ (ಬ್ರಹ್ಮ, ವಿಷ್ಣು, ಮಹೇಶ್ವರರಿಗೆ) ಅರ್ಧಾಂಗಿಯಾಗಿದ್ದಾಳೆ. ಬ್ರಹ್ಮನಿಗೆ ಸರಸ್ವತಿಯಾಗಿ, ವಿಷ್ಣುವಿಗೆ ಲಕ್ಷ್ಮಿಯಾಗಿ, ಶಂಕರನಿಗೆ ಪಾರ್ವತಿಯಾಗಿ ಶೋಭಿಸಿದ್ದಾಳೆ.

ಅಷ್ಟೇ ಅಲ್ಲ ಸೃಷ್ಟಿ, ಸ್ಥಿತಿ, ಲಯಕಾರ್ಯಗಳಲ್ಲಿ ತ್ರಿಮೂರ್ತಿಗಳಿಗೆ ತಾಯಿ ಯಾಗಿ ಅನುಗ್ರಹಿಸಿದ್ದಾಳೆ. ನಂತರ ಮಡದಿಯಾಗಿ ಬ್ರಹ್ಮನಿಗೆ ಸರಸ್ವತಿ ಕೇಳಿದಳಂತೆ, ‘ಸ್ವಾಮಿ ! ನೀವು ಸೃಷ್ಟಿಕಾರ್ಯದಲ್ಲಿ ತೊಡಗಿ ನನ್ನನ್ನು ಮರೆತೇ ಬಿಡುತ್ತೀರೋ ಏನೋ, ಆದ್ದರಿಂದ ಸದಾಕಾಲ ನಾನೂ ನಿಮ್ಮ ಜೊತೆಗೇ ಇರುತ್ತೇನೆ, ಜೊತೆಗೂಡಿಯೇ ಸಂಚರಿಸೋಣ’ ಎಂದು. ಅದಕ್ಕೆ ಬ್ರಹ್ಮ ಹೇಳಿದ : ‘ಬೇಡ ನಾನೊಬ್ಬನೇ ಸೃಷ್ಟಿಯ ಕಾರ್ಯ ನಿರ್ವಹಿಸುತ್ತೇನೆ. ನಿನ್ನನ್ನೂ ಕಟ್ಟಿಕೊಂಡು ನಾನೆಲ್ಲಿ ಅಡ್ಡಾಡಲಿ? ಹಿಂದಿಂದೇ ನೀನು ಅಡ್ಡಾಡಹತ್ತಿದರೆ ಮೂರು ಲೋಕ ಏನೆಂದೀತು?’, ಆಗ ನಸುಕೋಪಗೊಂಡ ಸರಸ್ವತಿ, ‘ಸ್ವಾಮಿ! ನಿಮಗೆ ಹೀಗೆ ಭಯ, ನಾಚಿಕೆ ಉಂಟಾದರೆ ನಾನು ಯಾರಿಗೂ ಕಾಣ ದಂತೆ ನಿಮ್ಮ ನಾಲಿಗೆ ಮೇಲೆ ಕುಳಿತುಬಿಡುತ್ತೇನೆ, ಒಪ್ಪಿಗೆಯೇ?’ ಎಂದಳು, ಬ್ರಹ್ಮನು ಮೌನವಾಗಿ ಒಪ್ಪಿಗೆ ಸೂಚಿಸಿದ. (ಬ್ರಹ್ಮನ ನಾಲಿಗೆ ಮುದ್ರಿಸಿದವಳು ಈ ಪರಾಶಕ್ತಿ) ಅವನ ನಾಲಿಗೆಯನ್ನೇ ಆಸನ ಮಾಡಿಕೊಂಡಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net