ಬಾಲರಾಮೋತ್ಸವಕ್ಕೆ ಕಾತರ

VV Ayodhya
ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮ ಮೂರ್ತಿ ಪ್ರವೇಶದ ಬಳಿಕ ವಿವಿಧ ಧಾರ್ವಿುಕ ವಿಧಿ-ವಿಧಾನಗಳನ್ನು ನೆರವೇರಿಸಲು ಯಜಮಾನರಿಂದ ಪ್ರಧಾನಸಂಕಲ್ಪ ಕೈಗೊಳ್ಳಲಾಯಿತು.
Published on

ರಾಘವ ಶರ್ಮ ನಿಡ್ಲೆ ಅಯೋಧ್ಯೆ
ಭುವನಾಭಿರಾಮ ಬಾಲರಾಮ ದೇವರ ಪಟ್ಟಾಭಿಷೇಕ ಮಹೋತ್ಸವ ಸನ್ನಿಹಿತವಾಗುತ್ತಿರುವಂತೆಯೇ ಇಡೀ ಜಗತ್ತಿನ ಗಮನ ಅಯೋಧ್ಯೆಯತ್ತ ತಿರುಗಿದೆ. ಸೋಮವಾರ (ಜ.22) ಪ್ರಾಣಪ್ರತಿಷ್ಠೆಯ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಲು ದೇಶವಿದೇಶಗಳಿಂದ ರಾಮಭಕ್ತರು ಸಾಕೇತ ನಗರಿಗೆ ಬಂದಿಳಿದಿದ್ದಾರೆ. ಎಲ್ಲೆಲ್ಲೂ ಶ್ರೀರಾಮ ಜಯರಾಮ, ಜಯಜಯ ರಾಮ ಭಜನೆ, ನೃತ್ಯ, ಘೋಷಣೆಗಳು ಅನುರಣಿಸುತ್ತಿವೆ. ರಾಮನೂರಿನ ಬೀದಿಬೀದಿಗಳು ರಾಮ, ಹನುಮ, ಸೀತೆ ಸೇರಿ ವಿವಿಧ ದೇವರ ವಿನ್ಯಾಸ, ಕೆತ್ತನೆ, ಗೋಡೆಚಿತ್ರ, ಸುಂದರ ಸೂರ್ಯಸ್ತಂಭಗಳು, ಚಿತ್ತಾಕರ್ಷಕ ಪ್ರವೇಶ ದ್ವಾರಗಳಿಂದ ಅಲಂಕೃತ ಗೊಂಡಿದ್ದು, ಐತಿಹಾಸಿಕ ರಾಮೋತ್ಸವದ ಈ ದೃಶ್ಯಕಲಾ ವೈಭವ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ರಾಮಮಂದಿರ, ಹನುಮಾನ್ ಗಡಿ, ಸೀತಾ ರಸೋಯಿ, ಕನಕಭವನ ದಶರಥ ಗದ್ದಿ ಸೇರಿ ವಿವಿಧ ಮಂದಿರ, ಧಾರ್ವಿುಕ ಕ್ಷೇತ್ರಗಳು ಕೂಡ ಕಳೆಗಟ್ಟಿದ್ದು, ಶ್ರೀರಾಮನ ಪ್ರಾಣಪ್ರತಿಷ್ಠೆಯ ಕ್ಷಣಕ್ಕೆ ಸಜ್ಜಾಗಿ ನಿಂತಿವೆ.

ರಾಮ ಮಂದಿರವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಲಾಗುತ್ತಿದ್ದು, ರಾತ್ರಿ ವೇಳೆಯಂತೂ ದೀಪಾಲಂಕಾರದ ಬಣ್ಣದ ಬೆಳಕುಗಳಿಂದಾಗಿ ಮಂದಿರದ ಭವ್ಯತೆ ಮತ್ತಷ್ಟು ಹೆಚ್ಚಿದೆ. ಸಂಜೆ ವೇಳೆ ಸರಯೂ ನದಿ ತಟದ ‘ರಾಮ್ ಕೀ ಪೈಡಿ’ಯಲ್ಲಂತೂ ಸಾವಿರಾರು ಜನ ಸೇರಿ ರಾಮನ ಆಗಮನವನ್ನು ಸಂಭ್ರಮಿಸುತ್ತಿದ್ದಾರೆ. ಲತಾ ಮಂಗೇಶ್ಕರ್ ಚೌಕ್ ಕಳೆದೊಂದು ವಾರದಿಂದ ಯುವಕರು, ವೃದ್ಧರೆನ್ನದೆ ಭಕ್ತರಿಂದ ಗಿಜಿಗುಡುತ್ತಿದೆ. ಟಿವಿ, ಯೂಟ್ಯೂಬ್ ಸೇರಿ ಜನರ ನಡುವಿನ ರಾಜಕೀಯ, ಧಾರ್ವಿುಕ ಚರ್ಚೆಗಳಿಗೂ ಇದು ವೇದಿಕೆಯಾಗಿಬಿಟ್ಟಿದೆ.

22ರಂದು ಅಯೋಧ್ಯೆಗೆ ಬರಬೇಡಿ ಎಂದು ಪ್ರಧಾನಿ ಮೋದಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು ಭಕ್ತರನ್ನು ವಿನಂತಿಸಿದ್ದರೂ, ‘ಇಂಥದ್ದೊಂದು ಐತಿಹಾಸಿಕ ಕ್ಷಣ ನಾವು ಬದುಕಿದ್ದಾಗ ಬಂದಿದೆ’ ಎಂದು ಲಕ್ಷಾಂತರ ಭಕ್ತರು ಅಯೋಧ್ಯೆಯ ದಾರಿ ಹಿಡಿದಿದ್ದಾರೆ. ಈಗಾಗಲೇ ಲಕ್ಷಕ್ಕಿಂತ ಹೆಚ್ಚು ಜನ ರಾಮನ ನಗರಿಯಲ್ಲಿ ಜಮಾಯಿಸಿದ್ದಾರೆ. ಭಾನುವಾರ ಅಂದಾಜು 3 ಲಕ್ಷ ಮಂದಿ ಅಯೋಧ್ಯೆಯಲ್ಲಿರುವ ಸಾಧ್ಯತೆಯಿದೆ. ಶನಿವಾರದಿಂದಲೇ ಅಯೋಧ್ಯೆಗೆ ಆಹ್ವಾನಿತ ಗಣ್ಯರು ಆಗಮಿಸಲಾರಂಭಿಸಿದ್ದು, ಭಾನುವಾರ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಎಲ್ಲ ವರ್ಗಗಳ ಅತಿಥಿಗಳೂ ಭಾಗಿ: ಕಾಶಿಯ ಮಣಿಕರ್ಣಿಕಾ ಘಾಟ್​ನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆಸುವ ಸಮುದಾಯದಿಂದ ಹಿಡಿದು ಸಮಾಜದ ವಿವಿಧ ವರ್ಗದ ಜನರಿಗೂ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದೆ. ಕರ್ನಾಟಕದ ಕಲಬುರಗಿಯ ಲಿಂಗರಾಜ ವಾಸವರಾಜ ಅಪ್ಪ, ಉದಯಪುರದ ಬನವಾಸಿ ಕಲ್ಯಾಣ ಆಶ್ರಮದ ಅಧ್ಯಕ್ಷ ರಾಮಚಂದ್ರ ಖರಾಡಿ, ಅಸ್ಸಾಂನ ರಾಮ್ ಕುಯಿ ಜೇಮಿ, ಗುರುಚರಣ್ ಸಿಂಗ್ ಗಿಲ್ ಜೈಪುರ, ಕೃಷ್ಣ ಮೋಹನ್ ಹದೋಯಿ, ರಮೇಶ್ ಜೈನ್ ಮುಲ್ತಾನಿ, ತಮಿಳುನಾಡಿನ ಅಜಲರಸನ್, ಮುಂಬೈನ ವಿಠ್ಠಲರಾವ್ ಕಾಂಬಳೆ, ಮಹಾರಾಷ್ಟ್ರದ ಲಾತೂರ್​ನ ಅಲೆಮಾರಿ ಸಮಾಜದ ಮಹಾದೇವ ಗಾಯಕವಾಡ್, ಲಖನೌನ ದಿಲೀಪ್ ವಾಲ್ಮೀಕಿ, ಕಾಶಿಯ ಅನಿಲ್ ಚೌಧರಿ ದೊಮ್ಾಜ, ಕೈಲಾಶ್ ಯಾದವ್, ಕವೀಂದ್ರ ಪ್ರತಾಪ್ ಸಿಂಗ್ ಮತ್ತು ಹರ್ಯಾಣದ ಪಲ್ವಲ್​ನ ಅರುಣ್ ಚೌಧರಿ ಸೇರಿ ಹಲವರು ಪ್ರಾಣಪ್ರತಿಷ್ಠೆಯಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿ ಎಂಬಂತೆ ಪರ್ವತ, ಕಾಡು, ನದಿ-ಸಮುದ್ರ ತಟಗಳ ಪ್ರದೇಶ, ದ್ವೀಪಗಳಲ್ಲಿ ವಾಸಿಸುವವರೂ ಪ್ರಾಣಪ್ರತಿಷ್ಠೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಭಗವಾನ್ ಶ್ರೀರಾಮ ಎಲ್ಲರಿಗೂ ಸೇರಿದ್ದಾನೆ. ಎಲ್ಲರೂ ಭಗವಂತನನ್ನು ಒಟ್ಟಾಗಿ ಆರಾಧಿಸೋಣ ಎಂಬ ಸಂದೇಶ ರವಾನಿಸುವುದು ಟ್ರಸ್ಟ್ ಉದ್ದೇಶವಾಗಿದೆ.

ಪ್ರಾಣಪ್ರತಿಷ್ಠೆಯ ಮಹತ್ವ: ದೇವರ ಮೂರ್ತಿಯೊಂದು ದೇವಾಲಯದಲ್ಲಿ ತನ್ನ ಸ್ಥಾನ ಕಂಡುಕೊಳ್ಳುವ ಮುನ್ನ ಮಹತ್ವದ ಧಾರ್ವಿುಕ ಪ್ರಕ್ರಿಯೆಗೆ ಒಳಪಡುತ್ತದೆ. ಪ್ರಾಣಪ್ರತಿಷ್ಠೆಗೆ ಮುನ್ನ ಮೂರ್ತಿ ಜಲ, ಧಾನ್ಯದ ಮಿಶ್ರಣದ ಸ್ಪರ್ಶದಲ್ಲಿರುತ್ತದೆ. ಅಂದರೆ ಇದು ಮೂರ್ತಿಯ ಶುದ್ಧೀಕರಣದ ಅವಧಿಯನ್ನು ಸಂಕೇತಿಸುತ್ತದೆ. ಮೂರ್ತಿ ದೇಗುಲ ಪ್ರವೇಶಿಸಿದ ನಂತರ ಅದಕ್ಕೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಜತೆಗೆ ವಿವಿಧ ಸುಗಂಧ ದ್ರವ್ಯಗಳಿಂದಲೂ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಗುತ್ತದೆ. ಮೂರ್ತಿಯನ್ನು ಪೂರ್ವಕ್ಕೆ ಮುಖಮಾಡಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಪುರೋಹಿತರು ಸ್ತೋತ್ರ, ಮಂತ್ರ, ಆಚರಣೆಗಳ ಪವಿತ್ರ ವಿಧಿವಿಧಾನ ಆರಂಭಿಸುತ್ತಾರೆ. ಈ ದೈವಿಕ ಕ್ರಿಯೆಗಳ ಮೂಲಕ ಮೂರ್ತಿಯು, ದೈವಿಕ ಸಾಕಾರದ ಆಧ್ಯಾತ್ಮಿಕ ಚೈತನ್ಯವನ್ನು ಪಡೆಯುತ್ತದೆ ಎಂದು ನಂಬಲಾಗಿದೆ. ಇದಾಗಿ, ಮೂರ್ತಿಯು ಪೂಜೆಗೆ ಸಿದ್ಧವಾಗಿದೆ ಎಂದು ಪರಿಗಣಿಸಿ, ಭಕ್ತರಿಗೆ ತಮ್ಮ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಪಾವಿತ್ರ್ಯತೆಗೆ ಸಾಕ್ಷಿಯಾಗುತ್ತವೆ.

ವಿವಿಧ ಸಂಪ್ರದಾಯಗಳ ಪ್ರತಿನಿಧಿಗಳು: ಶೈವ, ವೈಷ್ಣವ, ಶಾಕ್ತ, ಗಣಪತ್ಯ, ಪಾತ್ಯ, ಸಿಖ್, ಬೌದ್ಧ, ಜೈನ, ದಶನಾಮ ಶಂಕರ, ರಾಮಾನಂದಿ, ರಾಮಾನುಜ, ನಿಂಬಾರ್ಕ, ಮಾಧ್ವ, ವಿಷ್ಣು ನಾಮಿ, ರಾಮಸನೇಹಿ, ಘಿಸಾಪಂಥ, ಗರೀಬ್​ದಾಸಿ, ಗೌಡಿಯಾ, ಕಬೀರಪಂಥ, ವಾಲ್ಮೀಕಿ, ಶಂಕರದೇವ (ಅಸ್ಸಾಂ), ಮಾಧವದೇವ, ಇಸ್ಕಾನ್, ರಾಮಕೃಷ್ಣ ಮಿಷನ್, ಚಿನ್ಮಯ ಮಿಷನ್, ಭಾರತ ಸೇವಾಶ್ರಮ ಸಂಘ, ಗಾಯತ್ರಿ ಪರಿವಾರ, ಅನುಕೂಲ ಚಂದ್ರ ಠಾಕೂರ್ ಸಂಪ್ರದಾಯ, ಒಡಿಶಾದ ಮಹಿಮಾ ಸಮಾಜ, ಅಕಾಲಿ, ನಿರಂಕಾರಿ, ನಾಮಧಾರಿ (ಪಂಜಾಬ್), ರಾಧಾಸ್ವಾಮಿ ಮತ್ತು ಸ್ವಾಮಿನಾರಾಯಣ, ವಾರ್ಕರಿ, ವೀರಶೈವ ಮುಂತಾದ ಸಂಪ್ರದಾಯಗಳ ಪ್ರತಿನಿಧಿಗಳು ಪ್ರಾಣಪ್ರತಿಷ್ಠೆಗೆ ಸಾಕ್ಷಿಯಾಗಲಿದ್ದಾರೆ.

ಪ್ರಾಣಪ್ರತಿಷ್ಠೆ ಭಾಗವಾಗಿ, ಬಾಲರಾಮನ ಮೂರ್ತಿಗೆ 12 ಅಧಿವಾಸ ಪೂಜೆಗಳ ಜತೆಗೆ ದೇಗುಲದಲ್ಲಿ ವಾಸ್ತು ಪೂಜೆಯನ್ನೂ ನೆರವೇರಿಸಲಾಗಿದೆ. ಪೂಜಾ ಕಾರ್ಯದಲ್ಲಿ ಟ್ರಸ್ಟ್​ನ ಸದಸ್ಯ ಅನಿಲ್ ಮಿಶ್ರಾ, ಅವರ ಕುಟುಂಬಸ್ಥರು, ವಿಶ್ವ ಹಿಂದೂ ಪರಿಷತ್​ನ ಕಾರ್ಯಾಧ್ಯಕ್ಷ ಅಲೋಕ್​ಜೀ ಮತ್ತಿತರರು ಪಾಲ್ಗೊಂಡಿದ್ದರು.

ಮುಖ್ಯವೇದಿಕೆಗೆ 5 ಮಂದಿ: ಅಭಿಜಿನ್ ಮುಹೂರ್ತದಲ್ಲಿ ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠೆ ನಡೆಯಲಿದೆ. ಕಾಶಿಯ ಲಕ್ಷ್ಮೀಕಾಂತ ದೀಕ್ಷಿತರು ಮುಖ್ಯ ಆಚಾರ್ಯರಾಗಿ ವಿಧಿವಿಧಾನ ನೋಡಿಕೊಳ್ಳಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಾಣಪ್ರತಿಷ್ಠೆಯ ಮುಖ್ಯವೇದಿಕೆಯಲ್ಲಿರಲಿದ್ದಾರೆ. ಎಲ್ಲ ಅತಿಥಿಗಳು 10.30ರ ಒಳಗಾಗಿ ರಾಮಮಂದಿರದ ಪ್ರಾಂಗಣಕ್ಕೆ ಬರಬೇಕೆಂದು ಸೂಚಿಸಲಾಗಿದೆ. ಪ್ರಾಣಪ್ರತಿಷ್ಠೆ ಬಳಿಕ ಪಿಎಂ ಮೋದಿ, ಮೋಹನ್ ಭಾಗವತ್ ಸೇರಿ ನಾಲ್ವರು ಭಾಷಣ ಮಾಡಲಿದ್ದಾರೆ. 150ಕ್ಕೂ ಹೆಚ್ಚು ಸಂಪ್ರದಾಯಗಳ ಸಂತರು, ಮಹಾಮಂಡಲೇಶ್ವರ, ಮಂಡಲೇಶ್ವರ, ಶ್ರೀಮಹಾಂತ, ಮಹಾಂತ, ನಾಗ ಸಂಪ್ರದಾಯ ದವರ ಜತೆಗೆ 50ಕ್ಕೂ ಹೆಚ್ಚು ಆದಿವಾಸಿ, ಗಿರಿವಾಸಿಗಳ ಉಪಸ್ಥಿತಿ ಇರಲಿದೆ. ತತ್ವಸಿ ಮತ್ತು ದ್ವೀಪ ಬುಡಕಟ್ಟು ಸಂಪ್ರದಾಯದ ಪ್ರಮುಖರು ಭಾಗಿಯಾಲಿದ್ದಾರೆ ಎಂದು ಹೇಳಲಾಗಿದೆ.

ಶರ್ಕರ ಫಲಾಧಿವಾಸ: ನೂತನ ರಾಮ ಮಂದಿರದಲ್ಲಿ 22ರ ಪ್ರಾಣಪ್ರತಿಷ್ಠೆಗೆ ಸಂಬಂಧಿಸಿದ ಧಾರ್ವಿುಕ ವಿಧಿ ವಿಧಾನಗಳು 5ನೇ ದಿನ ಶನಿವಾರ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡು ಸಂಜೆವರೆಗೆ ಮುಂದುವರಿದವು. ರಾಮಲಲ್ಲಾ ಮುಖ್ಯ ಮೂರ್ತಿಗೆ ಮೊದಲು ಸಕ್ಕರೆ ಅಧಿವಾಸ ಮತ್ತು ಫಲಾಧಿವಾಸವನ್ನು ಮಾಡಲಾಯಿತು. ನಂತರ 81 ಕಲಶಗಳಲ್ಲಿ ಸಂಗ್ರಹಿಸಿದ ಔಷಧೀಯ ಗುಣವುಳ್ಳ ಪವಿತ್ರ ಜಲದಿಂದ ಅಭಿಷೇಕ ಮಾಡಲಾಯಿತು. ಮೂರ್ತಿಗೆ ಪುಷ್ಪಾಧಿವಾಸ ನಡೆಸಿ, ಶನಿವಾರದ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಭಾನುವಾರ ಮೂರ್ತಿ ಪ್ರತಿಷ್ಠಾಪಿಸುವ ಇತರೆ ಧಾರ್ವಿುಕ ಪ್ರಕ್ರಿಯೆಗಳು ಮುಂದುವರಿಯಲಿವೆ. ಹೊಸ ರಾಮಮಂದಿರದಲ್ಲಿ ಬಾಲರಾಮನ ಹಳೆಯ ಮೂರ್ತಿಯೂ ಇದ್ದು, ಅದನ್ನೂ ಸಂಪೂರ್ಣ ಧಾರ್ವಿುಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು ಎಂದು ಟ್ರಸ್ಟ್ ಮಾಹಿತಿ ಹಂಚಿಕೊಂಡಿದೆ.

ಪ್ರಧಾನಿ ಮೋದಿ ಪುಣ್ಯಸ್ನಾನ: ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ‘ಯಜಮಾನ’ರಾಗಿ ಸಂಕಲ್ಪ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ 11 ದಿನಗಳ ಅನುಷ್ಠಾನ ನಡೆಸುತ್ತಿದ್ದಾರೆ. ಅದರ ಅಂಗವಾಗಿ ದೇಶದ ವಿವಿಧ ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ. ಶನಿವಾರ ತಮಿಳುನಾಡಿನ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ‘ಕಂಬ’ ರಾಮಾಯಣ ಆಲಿಸಿದರು. ರಾಮೇಶ್ವರಂನ ‘ಅಗ್ನಿ ತೀರ್ಥ’ ಕಡಲ ತೀರದಲ್ಲಿ ಪವಿತ್ರ ಸ್ನಾನ ಮಾಡಿದರು. ಬಳಿಕ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸುವುದಕ್ಕೂ ಮುನ್ನ ದೇಗುಲದ ಬಾವಿಗಳ ನೀರಲ್ಲೂ ಮಿಂದರು. ಕೇವಲ ಎಳನೀರನ್ನಷ್ಟೇ ಸೇವಿಸುತ್ತ ಪ್ರಧಾನಿ ಕಠಿಣ ಉಪವಾಸ ವ್ರತ ಆಚರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net