

ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್ ದೇಶಮುಖ್ ಹೆಸರಲ್ಲಿ ಆರ್ಥಿಕ ಅಪರಾಧಗಳ ತನಿಖೆ ನಡೆಸುವ ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟ್(ಇಡಿ) ಲುಕ್ ಔಟ್ ನೋಟೀಸ್ ಹೊರಡಿಸಿದೆ. ಹಲವು ಸಮನ್ಸ್ಗಳಿಗೆ ದೇಶಮುಖ್ ಸೂಕ್ತವಾಗಿ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ, ಅವರು ದೇಶ ಬಿಟ್ಟು ಹೋಗುವುದನ್ನು ತಡೆಯಲು ಈ ನೋಟೀಸ್ ಜಾರಿಮಾಡಲಾಗಿದೆ ಎನ್ನಲಾಗಿದೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ನಾಯಕರಾದ ದೇಶ್ಮುಖ್ ವಿರುದ್ಧ ಸುಮಾರು 100 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ(ಮನಿ ಲಾಂಡರಿಂಗ್) ಆರೋಪದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ. ವಿಚಾರಣೆಗಾಗಿ ಹಾಜರಾಗಲು ಅವರಿಗೆ ಹಲವು ಸಮನ್ಸ್ ಜಾರಿಗೊಳಿಸಿದ್ದರೂ ಈವರೆಗೆ ಭೌತಿಕ ಹಾಜರಾತಿ ನೀಡಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ತಾವು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಮುಗಿಯುವವರೆಗೆ ಇಡಿ ಮುಂದೆ ಬರುವುದಿಲ್ಲವೆಂದು ಹೇಳಿರುವ ದೆಶ್ಮುಖ್, ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ತಮ್ಮ ಹೇಳಿಕೆ ದಾಖಲಿಸಲು ಸಿದ್ಧರಿರುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವರಿಗೆ ಸುಪ್ರೀಂ ಕೋರ್ಟ್ ಈವರೆಗೆ ಯಾವುದೇ ಮಧ್ಯಂತರ ಪರಿಹಾರ ನೀಡಿಲ್ಲ. ಮತ್ತೊಂದೆಡೆ, ದೇಶ್ಮುಖ್ರ ಸಹಾಯಕ ಕುಂದನ್ ಶಿಂದೆ ಮತ್ತು ಆಪ್ತ ಕಾರ್ಯದರ್ಶಿ ಸಂಜೀವ್ ಪಾಲಂದ್ರನ್ನು ಬಂಧಿಸಿರುವ ಇಡಿ, ಅವರ ವಿರುದ್ಧ ಅದಾಗಲೇ ಮನಿ ಲಾಂಡರಿಂಗ್ನಲ್ಲಿ ಸಹಾಯ ಮಾಡಿರುವುದಾಗಿ ಚಾರ್ಜ್ಶೀಟ್ ಸಲ್ಲಿಸಿದೆ. ಇದೇ ಸೆಪ್ಟೆಂಬರ್ 3 ರಂದು ದೇಶ್ಮುಖ್ರ ವಕೀಲರ ತಂಡದ ಸದಸ್ಯ ಆನಂದ್ ದಾಗಾ ಅವರನ್ನು ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ಆರೋಪದ ಮೇಲೆ ಸಿಬಿಐ ಬಂಧಿಸಿದೆ.
ಮಹಾರಾಷ್ಟ್ರದ ಗೃಹ ಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ಮುಂಬೈನ ಬಾರ್ಗಳಿಂದ ಕೋಟ್ಯಂತರ ರೂ.ಗಳನ್ನು ವಸೂಲಿ ಮಾಡಿರುವುದಾಗಿ ದೇಶ್ಮುಖ್ ಮೇಲೆ ಆರೋಪ ಎದ್ದಿತ್ತು. ಈ ನಿಟ್ಟಿನಲ್ಲಿ ಸಿಬಿಐ ಏಪ್ರಿಲ್ 21 ಕ್ಕೆ ಎಫ್ಐಆರ್ ದಾಖಲಿಸಿದ ನಂತರ, ಇಡಿ, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. (ಏಜೆನ್ಸೀಸ್)