

ಮುಂಬೈ: ಷೇರು ಮಾರುಕಟ್ಟೆಯಲ್ಲಿ ದೀರ್ಘಕಾಲ ಹೂಡಿಕೆ ಮಾಡುವವರು ಸೂಚ್ಯಂಕ ಕುಸಿತ ಇದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವುದು ಸಾಮಾನ್ಯ. ಅಂದರೆ, ಷೇರು ಬೆಲೆಗಳು ಕುಸಿದ ಸಂದರ್ಭದಲ್ಲಿ ಹೂಡಿಕೆ ಮಾಡುತ್ತಾರೆ. ದೀರ್ಘಕಾಲದಲ್ಲಿ ಬೆಲೆಗಳು ಏರಿದಾಗ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ. ಆದರೆ, ಭಾರತೀಯ ಷೇರು ಮಾರುಕಟ್ಟೆಗಳು ಈಗ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಬಿಎಸ್ಇ ಹಾಗೂ ನಿಫ್ಟಿ ಸೂಚ್ಯಂಕಗಳು ಏರುತ್ತಲೇ ಸಾಗಿವೆ. ಷೇರು ಬೆಲೆಗಳು ಗಗನಮುಖಿಯಾಗಿರುವಾಗ, ಇಂತಹ ದೀರ್ಘಾವಧಿ ಕಾಲ ಹೂಡಿಕೆ ಮಾಡುವವರು ಏನು ಮಾಡಬೇಕು?
ಈ ಬಗೆಗೆ ಚಿಂತೆ ಮಾಡಬೇಕಿಲ್ಲ. ಹಿಂದಿನ ಇತಿಹಾಸ ಗಮನಿಸಿದರೆ ಇಂತಹ ಅವಕಾಶ ಆಗಾಗ್ಗೆ ಬಂದೇ ಬರುತ್ತದೆ. ಆಗ ಹೂಡಿಕೆ ಅವಕಾಶ ಇದ್ದೇ ಇರುತ್ತದೆ ಎನ್ನುತ್ತಾರೆ ಹೂಡಿಕೆ ಪರಿಣತರು, ವಿಶ್ಲೇಷಕರು.
ಮಾರುಕಟ್ಟೆಯಲ್ಲಿ ಈ ವರ್ಷವೂ ಇಂತಹ ಖರೀದಿ ಅವಕಾಶಗಳು ಬರಬಹುದು ಎಂದು ಅವರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಅವರು ಹಿಂದಿನ ಉದಾಹರಣೆಗಳನ್ನು ನೀಡುತ್ತಾರೆ.
ಸೂಚ್ಯಂಕ ಕುಸಿತದ ಕುರಿತು ಐಸಿಐಸಿಐ ಡೈರೆಕ್ಟ್ ನಡೆಸಿದ ಅಧ್ಯಯನದ ಪ್ರಕಾರ ಕಳೆದ 12 ವರ್ಷಗಳಲ್ಲಿ 9 ಸಂದರ್ಭಗಳಲ್ಲಿ ನಿಫ್ಟಿ ಸೂಚ್ಯಂಕವು ಶೇಕಡಾ 10 ಮತ್ತು ಶೇಕಡಾ 16ರ ನಡುವೆ ಕುಸಿತ ಕಂಡಿದೆ. ಇನ್ನು ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಷೇರುಗಳು ಪ್ರತಿ ವರ್ಷವೂ ಕುಸಿತ ಕಾಣುತ್ತವೆ.
ಕಳೆದ 12 ವರ್ಷಗಳಲ್ಲಿ ಮಿಡ್ಕ್ಯಾಪ್ 150 ಸೂಚ್ಯಂಕವು (101ರಿಂದ 250ನೇ ಸ್ಥಾನದಲ್ಲಿರುವ ಕಂಪನಿಗಳ ಸರಾಸರಿ ಬೆಲೆ) 8 ಸಂದರ್ಭಗಳಲ್ಲಿ ಶೇಕಡಾ 10 ರಿಂದ ಶೇಕಡಾ 24ರ ನಡುವೆ ಕುಸಿತ ಕಂಡಿದೆ. ಅಲ್ಲದೆ, 2020 ರಲ್ಲಿ ಶೇಕಡಾ 38 ಕುಸಿತವನ್ನೂ ದಾಖಲಿಸಿದೆ.
ಸ್ಮಾಲ್-ಕ್ಯಾಪ್ ಷೇರುಗಳಲ್ಲಿನ ಕುಸಿತವು ತೀಕ್ಷ್ಣವಾಗಿದೆ. ಈ 12 ವರ್ಷಗಳಲ್ಲಿ ಸ್ಮಾಲ್ಕ್ಯಾಪ್ 100 ಸೂಚ್ಯಂಕವು (100 ಸಣ್ಣ ಕಂಪನಿಗಳ ಷೇರುಗಳ ಸರಾಸರಿ ಬೆಲೆ) 10 ಸಂದರ್ಭಗಳಲ್ಲಿ ಶೇಕಡಾ 10 ಮತ್ತು ಶೇಕಡಾ 34ರ ನಡುವೆ ಕುಸಿದಿದೆ. ಅಲ್ಲದೆ, ಈ ಸೂಚ್ಯಂಕವು 2020ರಲ್ಲಿ ಶೇಕಡಾ 47ರಷ್ಟು ಕುಸಿದಿದೆ.
ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಧಾರಣ ಮತ್ತು ಸಂಕ್ಷಿಪ್ತ ಕುಸಿತವಾಗಿದೆ. ಹೀಗಾಗಿ ಇವುಗಳನ್ನು ಇನ್ನು ಮುಂದೆ ಕುಸಿತ ಕಾಣಬಹುದು ಎಂದು ಎಂದು ಫಂಡ್ ಮ್ಯಾನೇಜರ್ಗಳು ಅಂದಾಜಿಸುತ್ತಾರೆ.
ಸ್ಮಾಲ್ಕ್ಯಾಪ್ಗಳು ಮತ್ತು ಮಿಡ್ಕ್ಯಾಪ್ಗಳು ಕಳೆದ ಮೂರು ವರ್ಷಗಳಲ್ಲಿ ಬಹುತೇಕವಾಗಿ ಏರಿಕೆ ಕಂಡಿವೆ. ಹೀಗಾಗಿ ಈ ವಿಭಾಗದಲ್ಲಿ ಮುಂದೆ ಚಂಚಲತೆ ಕಾಣಬಹುದು ಎಂದೂ ಅವರು ಹೇಳುತ್ತಾರೆ.
2023 ರಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ತಮ್ಮ ಗೆಲುವಿನ ಸರಣಿಯನ್ನು ಎಂಟನೇ ವರ್ಷವೂ ಮುಂದುವರಿಸಿದೆ. 2023 ರಲ್ಲಿ ನಿಫ್ಟಿ ಸೂಚ್ಯಂಕ ಶೇಕಡಾ 20ರಷ್ಟು ಏರಿಕೆ ಕಂಡರೆ, ಮಿಡ್ಕ್ಯಾಪ್ 150 ಸೂಚ್ಯಂಕ ಶೇಕಡಾ 44 ಮತ್ತು ಸ್ಮಾಲ್ಕ್ಯಾಪ್ 100 ಸೂಚ್ಯಂಕ ಶೇ. 56 ರಷ್ಟು ಹೆಚ್ಚಳವಾಗಿದೆ. ಹೀಗಿದ್ದರೂ ಇನ್ನೂ 4-5 ವರ್ಷಗಳವರೆಗೆ, ಸ್ಮಾಲ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ಗಳು ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿವೆ ಎಂದು ಪರಿಣತರು ಹೇಳುತ್ತಾರೆ.