ಸಂಸತ್​ಗೆ ಆಗಂತುಕರ ಆತಂಕ!; ಪ್ರಜಾತಂತ್ರದ ದೇಗುಲದಲ್ಲಿ ಭಾರಿ ಭದ್ರತಾ ಲೋಪ

Teargas
Published on

ರಾಘವ ಶರ್ಮ ನಿಡ್ಲೆ, ನವದೆಹಲಿ
ಸಂಸತ್ ಭವನದ ಮೇಲೆ 2001ರಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರವಾದಿಗಳು ದಾಳಿ ನಡೆಸಿದ ಘಟನೆಗೆ 22 ವರ್ಷ ತುಂಬಿದ ದಿನದಂದೇ ನವದೆಹಲಿಯ ಹೊಸ ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪದ ಘಟನೆ ನಡೆದಿದ್ದು, ಇಡೀ ದೇಶವೇ ಬೆಚ್ಚಿಬೀಳುವಂತಾಗಿದೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ನೀಡಿದ್ದ ಲೋಕಸಭೆ ಪಾಸ್​ನಲ್ಲಿ ಕಲಾಪ ವೀಕ್ಷಣೆಗೆ ಬಂದಿದ್ದ ಸಾಗರ್ ಶರ್ಮ ಮತ್ತು ಡಿ. ಮನೋರಂಜನ್ ಎಂಬುವರು ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ಹಾರಿ ಕ್ಯಾನಿಸ್ಟರ್ (ತಗಡಿನ ಸಣ್ಣ ಡಬ್ಬಿ) ಮೂಲಕ ಹಳದಿ ಬಣ್ಣದ ಹೊಗೆ ಎಬ್ಬಿಸಿದ್ದಾರೆ. ಈ ಘಟನೆ ಸಂಸದ ವರ್ಗವನ್ನೇ ಆಘಾತಕ್ಕೀಡು ಮಾಡಿದೆ. ಐದಾರು ಹಂತಗಳ ಭದ್ರತಾ ಪರಿಶೀಲನೆಗಳ ಮಧ್ಯೆಯೂ ಯುವ ಕರು ತಗಡಿನ ಡಬ್ಬಿಯನ್ನು ಲೋಕಸಭೆಯೊಳಗೆ ತಂದದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. 2001ರ ದಾಳಿ ಬಳಿಕ ಸಂಸತ್ತಿನಲ್ಲಿ ಭದ್ರತಾ ವ್ಯವಸ್ಥೆಯನ್ನು ವರ್ಷದಿಂದ ವರ್ಷಕ್ಕೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಹೊಸ ಸಂಸತ್ ಭವನದಲ್ಲಂತೂ ಉನ್ನತ ದರ್ಜೆಯ ಭದ್ರತಾ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

ಹೀಗಿದ್ದರೂ, ಯುವಕರು ಉದ್ದೇಶಿತ ಕೃತ್ಯ ಎಸಗಲು ಯಶಸ್ವಿಯಾಗಿರುವುದರಿಂದ ಇಲ್ಲಿನ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ. ಪೊಲೀಸರು ಮತ್ತು ತಪಾಸಣಾ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಸಂಸತ್ ಮೇಲೆ ದಾಳಿ ಮಾಡಬಹುದು ಎನ್ನುವುದಕ್ಕೆ ಘಟನೆ ಪುಷ್ಠಿ ನೀಡಿದೆ.

ಪ್ರತಾಪ್ ಪಾಸ್ ನೀಡಿದ್ದೇಕೆ?: ಸಾಗರ್ ಶರ್ಮ ಮತ್ತು ಮನೋರಂಜನ್​ಗೆ ಸಂಸತ್ತಿನ ಪಾಸ್ ನೀಡಿದ್ದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ. ಹೊಸ ಸಂಸತ್ತಿನ ವೀಕ್ಷಣೆ ಮಾಡಬೇಕು ಎಂದು ಪ್ರತಾಪ್ ಸಿಂಹ ಅವರ ಮೈಸೂರು ಕಚೇರಿ ಸಿಬ್ಬಂದಿಗೆ ಮೂರು ತಿಂಗಳಿಂದ ಮನೋರಂಜನ್ ಮನವಿ ಮಾಡುತ್ತಿದ್ದ ಎಂದು ಮೂಲಗಳಿಂದ ಗೊತ್ತಾಗಿದೆ. ಕೊನೆಗೆ ಮೈಸೂರು ಕಚೇರಿ ಸಿಬ್ಬಂದಿ ಮನವಿ ಮೇರೆಗೆ ಪ್ರತಾಪ್ ಲೋಕಸಭೆ ಪಾಸ್​ಗೆ ಸಹಿ ಹಾಕಿದ್ದಾರೆ. ಸಾಗರ್ ಶರ್ಮ ತನ್ನ ಸ್ನೇಹಿತ ಎಂದಿದ್ದರಿಂದ ಮನೋರಂಜನ್​ಗೆ ಆತನ ಹೆಸರಿನಲ್ಲೇ ಪಾಸ್ ನೀಡಲಾಗಿದೆ. ಒಂದು ಹೆಸರಿನಲ್ಲಿ ಮತ್ತೊಬ್ಬರಿಗೆ ಪ್ರವೇಶ ನೀಡಲು ಸಾಧ್ಯವಿರುವುದರಿಂದ ಅದೇ ಪಾಸ್​ನಲ್ಲಿ ಇಬ್ಬರೂ ಸಂಸತ್ತಿನ ಒಳಪ್ರವೇಶಿಸಿದ್ದಾರೆ. ಸಾಮಾನ್ಯವಾಗಿ, ಕ್ಷೇತ್ರದ ಮತದಾರರು, ಪರಿಚಯಸ್ಥರು, ಸ್ನೇಹಿತರು ಪಾಸ್​ಗಾಗಿ ಮನವಿ ಮಾಡಿದಾಗ, ಸಂಸದರೂ ಪಾಸ್ ನೀಡುವ ವ್ಯವಸ್ಥೆ ಮಾಡುತ್ತಾರೆ. ನಂಬಿಕೆ ಮೇಲೆ ಪಾಸ್ ನೀಡುವುದರಿಂದ ಇಂಥದ್ದೊಂದು ಕೃತ್ಯ ಎಸಗಬಹುದು ಎಂಬ ಕಲ್ಪನೆ ಯಾರಿಗೂ ಇರುವುದಿಲ್ಲ. ಹೀಗಿದ್ದರೂ, ಈ ಘಟನೆ ಬಳಿಕ ಇಂಥವರಿಗೆ ಪ್ರತಾಪ್ ಪಾಸ್ ನೀಡಿದ್ದೇಕೆ? ಅವರ ಪೂರ್ವಾಪರ ತಿಳಿದುಕೊಳ್ಳದೆ ಪಾಸ್ ನೀಡುವುದು ಸರಿಯೇ? ಯುವಕರಿಗೂ ಪ್ರತಾಪ್​ಗೂ ಏನು ಸಂಬಂಧ ಎಂಬೆಲ್ಲ ಚರ್ಚೆಗಳು ಜೋರಾಗಿವೆ.

ಉದ್ದೇಶ ಏನಿತ್ತು?: ಯುವಕರು ಭಯೋತ್ಪಾದಕರಲ್ಲದಿ ದ್ದರೂ, ಸಂಸದರಲ್ಲಿ ಆತಂಕ ಸೃಷ್ಟಿಸುವ ಉದ್ದೇಶ ಹೊಂದಿದ್ದರೆನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. 2001 ಕರಾಳ ಭಯೋತ್ಪಾದನಾ ದಾಳಿಯ 22ನೇ ವರ್ಷದಂದೇ ಈ ದುಷ್ಕೃತ್ಯ ಎಸಗಿರುವುದರಿಂದ ಇದೊಂದು ವ್ಯವಸ್ಥಿತ ಪಿತೂರಿ ಎನ್ನುವುದು ಸ್ಪಷ್ಟ. ಸಾಗರ್ ಮತ್ತು ಮನೋರಂಜನ್ ಸದನದೊಳಗೆ ದುಷ್ಕೃತ್ಯ ಎಸಗುತ್ತಿದ್ದಂತೆ ಸಂಸತ್ತಿನ ಹೊರಭಾಗ ದಲ್ಲಿ ಅನ್ಮೋಲ್ ಎಂಬ ಯುವಕ ಮತ್ತು ನೀಲಂ ಆಜಾದ್ ಎಂಬ ಮಹಿಳೆ ಕ್ಯಾನಿಸ್ಟರ್​ಗಳಿಂದ ಹಳದಿ ಬಣ್ಣ ಸಿಂಪಡಿಸಿ, ಸರ್ವಾಧಿಕಾರ ಕೊನೆಗೊಳಿಸಿ ಎಂದು ಘೊಷಣೆ ಕೂಗಿದ್ದಾರೆ. ನಾಲ್ವರನ್ನೂ ದಿಲ್ಲಿ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ದುಷ್ಕರ್ವಿುಗಳು ಯಾರು?: 27 ವರ್ಷದ ಸಾಗರ್ ಶರ್ಮ, ಉತ್ತರ ಪ್ರದೇಶದ ಲಖನೌದ ಆಲಂಭಾಗ್​ನಲ್ಲಿರುವ ರಾಮನಗರದ ನಿವಾಸಿಯಾಗಿದ್ದು, ರೋಶನ್ ಎಂಬವರ ಪುತ್ರ. 34 ವರ್ಷದ ಮನೋರಂಜನ್, ಮೈಸೂರಿನ ವಿಜಯನಗರದ ಡಿ. ದೇವರಾಜ್ ಎಂಬವರ ಪುತ್ರನಾಗಿದ್ದು, ಬೆಂಗಳೂರಿನ ವಿವೇಕಾನಂದ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾನೆ. ಸಂಸತ್ತಿನ ಹೊರಭಾಗ ಪ್ರತಿಭಟನೆ ನಡೆಸಿದ ವೇಳೆ ಬಂಧನಕ್ಕೀಡಾದ ನೀಲಂ ಆಜಾದ್, ಹರ್ಯಾಣದ ಜಿಂದ್ ಜಿಲ್ಲೆಯ ಘಾಸೋ ಖುರ್ದ್ ಹಳ್ಳಿಗೆ ಸೇರಿದ್ದು, ಹಿಸಾರ್​ನ ಪಿಜಿಯೊಂದರಲ್ಲಿ ನೆಲೆಸಿದ್ದಾಳೆ. ಅನ್ಮೋಲ್ ಮಹಾರಾಷ್ಟ್ರದ ಲಾತೂರ್ ಮೂಲದವನು. ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಭಾಗದಲ್ಲಿ ನಡೆದಿದ್ದ ರೈತರ ಪ್ರತಿಭಟನೆಯಲ್ಲಿ ನೀಲಂ ಸಕ್ರಿಯವಾಗಿ ಭಾಗಿಯಾಗಿದ್ದಳು ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತಿತರರು ಕಳೆದ ಮೇ ತಿಂಗಳಲ್ಲಿ ದಿಲ್ಲಿಯ ಜಂತರ್​ವುಂತರ್​ನಲ್ಲಿ ಪ್ರತಿಭಟನೆ ನಡೆಸಿದ್ದ ವೇಳೆ ಸಾಕ್ಷಿ ಮಲಿಕ್ ತಾಯಿ ಜತೆಗೆ ಬಂಧನಕ್ಕೀಡಾಗಿದ್ದಳು. ಕೇಂದ್ರದ ವಿರುದ್ಧದ ಪ್ರತಿಭಟನೆಗಳಲ್ಲಿ ನೀಲಂ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.

ಮೇಜಿನ ಮೇಲೆ ಜಿಗಿದರು: ಬುಧವಾರದಂದು ಮಧ್ಯಾಹ್ನದ ಭೋಜನಕ್ಕೆ ಮುನ್ನ ಕಲಾಪ ಮುಗಿಯುವ ವೇಳೆ ಮೈಸೂರು ಮೂಲದ ಡಿ. ಮನೋರಂಜನ್ ಮತ್ತು ಉತ್ತರಪ್ರದೇಶದ ಲಖನೌ ಮೂಲದ ಸಾಗರ್ ಶರ್ಮ ಪಬ್ಲಿಕ್ ಗ್ಯಾಲರಿಯಲ್ಲಿ (ಸಾರ್ವಜನಿಕರು ಕಲಾಪ ವೀಕ್ಷಣೆಗೆ ಕೂರುವ ಸ್ಥಳ) ಕುಳಿತಿದ್ದರು. ಕಲಾಪ ಮುಗಿಯುತ್ತಿದ್ದಂತೆಯೇ ಗ್ಯಾಲರಿಯಿಂದ ಸಂಸದರ ಮೇಜಿನ ಮೇಲೆ ಜಿಗಿದ ಯುವಕರು, ಮೇಜುಗಳ ಮೇಲೆಯೇ ಅತ್ತಿಂದಿತ್ತ ಓಡಾಡಿ, ಸಂಸದರನ್ನು ತಬ್ಬಿಬ್ಬುಗೊಳಿಸಿದ್ದಾರೆ. ನಂತರ ತಮ್ಮ ಕೈಯಲ್ಲಿದ್ದ ತಗಡಿನ ಸಣ್ಣ ಡಬ್ಬಿಯಿಂದ ಹಳದಿ ಹೊಗೆ ಎಬ್ಬಿಸಿದ್ದಾರೆ. ಈ ಹಂತದಲ್ಲಿ ಬೆಚ್ಚಿಬಿದ್ದ ಕೆಲ ಸಂಸದರು ಅಲ್ಲಿಂದ ಹೊರ ಓಡಿದ್ದಾರೆ. ಮತ್ತೆ ಕೆಲ ಸಂಸದರು ಯುವಕರನ್ನು ಹಿಡಿದು ಥಳಿಸಿದ್ದಾರೆ.

ಹಲವರ ಬಂಧನ: ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ವ, ನೀಲಂ, ಅಮೋಲ್ ಶಿಂಧೆ, ಲಲಿತ್ ಮತ್ತು ವಿಶಾಲ್​ನನ್ನು ಬಂಧಿಸಲಾಗಿದೆ. ವಿಶಾಲ್ ಪತ್ನಿ ರಾಖಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಮೊದಲೇ ಮೇಸೆಂಜಿಂಗ್ ಆಪ್ ಮೂಲಕ ಇವರು ಪರಸ್ಪರ ಸಂಪರ್ಕದಲ್ಲಿದ್ದು, ಷಡ್ಯಂತ್ರ ರೂಪಿಸಿದ್ದರು ಎನ್ನಲಾಗಿದೆ. ದೇಶದ ವಿವಿಧ ನಗರಗಳಿಂದ ಬಂದ ಆರು ಆರೋಪಿಗಳು ಗುರುಗ್ರಾಮದಲ್ಲಿರುವ ಫ್ಲ್ಯಾಟ್​ನಲ್ಲಿ ತಂಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net