

ನವದೆಹಲಿ: ಆನ್‌ಲೈನ್ ಗ್ಯಾಂಬ್ಲಿಂಗ್, ಕ್ಯಾಸಿನೋ ಮತ್ತು ಕುದುರೆ ರೇಸ್ ಕ್ಲಬ್ಸ್ ಮೇಲೆ ಶೇ. 28 ರಷ್ಟು ತೆರಿಗೆ ವಿಧಿಸುವ ಎರಡು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಗಳ ತಿದ್ದುಪಡಿಯನ್ನು ಲೋಕಸಭೆಯಲ್ಲಿಂದು ಅಂಗೀಕರಿಸಲಾಯಿತು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಮತ್ತು ಸಮಗ್ರ ಜಿಎಸ್‌ಟಿ ಕಾನೂನುಗಳನ್ನು ಮಾರ್ಪಡಿಸಲು ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಪರಿಚಯಿಸಿ, ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸ್ ಕ್ಲಬ್‌ಗಳ ಮೇಲಿನ ಶೇ. 28 ರಷ್ಟು ತೆರಿಗೆ ವಿಚಾರವನ್ನು ಪ್ರಸ್ತಾಪಿಸಿದರು.
ವಿಪಕ್ಷಗಳ ಪ್ರತಿಭಟನೆಯ ನಡುವೆಯೂ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ-2023 ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ-2023 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಪ್ರಸ್ತಾವಿತ ಬದಲಾವಣೆಗಳು ಸಿಜಿಎಸ್ಟಿ ಕಾಯಿದೆ-2017 ರ ಶೆಡ್ಯೂಲ್ III ಗೆ ಷರತ್ತುಗಳನ್ನು ಪರಿಚಯಿಸುವುದನ್ನು ಒಳಗೊಂಡಿರುತ್ತದೆ. ಇದು ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿನ್‌ಗಳಲ್ಲಿನ ವಹಿವಾಟುಗಳ ಮೇಲೆ ತೆರಿಗೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವ ಗುರಿಯನ್ನು ಹೊಂದಿದೆ.
ಅದೇ ರೀತಿ ಐಜಿಎಸ್ಟಿ ಕಾಯಿದೆಯೊಳಗೆ, ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿರುವ ಆಫ್‌ಶೋರ್ ಘಟಕಗಳಿಗೆ GST ಬಾಧ್ಯತೆಗಳನ್ನು ಸ್ಥಾಪಿಸಲು ತಿದ್ದುಪಡಿ ಒಳಗೊಂಡಿರುತ್ತದೆ ಮತ್ತು ಭಾರತದಲ್ಲಿ GST ಆಫ್‌ಶೋರ್ ಘಟಕಗಳ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ. ಇದಲ್ಲದೆ, ಯಾವುದೇ ಕ್ರಮಗಳನ್ನು ಅನುಸರಿಸದಿರುವ ಸಂದರ್ಭಗಳಲ್ಲಿ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನಿಲ್ಲಿಸುವ ನಿಬಂಧನೆಗಳನ್ನು ಒಳಗೊಳ್ಳುತ್ತವೆ.
ಸೆಂಟ್ರಲ್ GST (CGST) ಮತ್ತು ಇಂಟಿಗ್ರೇಟೆಡ್ GST (IGST) ಕಾನೂನುಗಳಿಗೆ ಈ ಮೇಲಿನ ತಿದ್ದುಪಡಿಗಳಿಗಾಗಿ ಹಿಂದಿನ ವಾರದಲ್ಲೇ GST ಮಂಡಳಿಯಿಂದ ಅನುಮೋದನೆ ದೊರೆತಿದೆ. ಇದರ ಅಡಿಯಲ್ಲಿ ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸಿಂಗ್‌ನ ಸಂಪೂರ್ಣ ವ್ಯವಹಾರದ ಮೇಲೆ ಶೇ. 28 ರಷ್ಟು ಜಿಎಸ್‌ಟಿ ಬೀಳಲಿದೆ. (ಏಜೆನ್ಸೀಸ್)