ಮದ್ವೆಯಾದ ಒಂದೂವರೆ ವರ್ಷದಲ್ಲಿ ಗೃಹಿಣಿ ನಿಗೂಢ ಸಾವು: ಗಂಡನ ವಿರುದ್ಧ ಕೇಳಿಬಂತು ಗಂಭೀರ ಆರೋಪ

Housewife Mandya
Published on

ಮಂಡ್ಯ: ಗೃಹಿಣಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾಳೆ ಎಂದು ಪತಿ ಹೇಳಿಕೆ ನೀಡಿದ್ದಾನೆ. ಆದರೆ, ಗೃಹಿಣಿಯ ಪಾಲಕರು ಕೊಲೆ ಆರೋಪ ಮಾಡಿದ್ದು, ಈ ಪ್ರಕರಣ ಇದೀಗ ತನಿಖೆಯ ಹಾದಿ ಹಿಡಿದಿದೆ.

ಮೃತಳನ್ನು ಮೈಸೂರು ಮೂಲದ ದರ್ಶಿನಿ (21) ಎಂದು ಗುರುತಿಸಲಾಗಿದೆ. ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಕೆಆರ್.ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ದರ್ಶಿನಿ ಮನೆಯವರಿಗೆ ಪತಿ ಸೂರ್ಯ ಮಾಹಿತಿ ನೀಡಿದ್ದ. ಅವರು ಆಸ್ಪತ್ರೆಗೆ ಆಗಮಿಸುವಷ್ಟರಲ್ಲಿ ದರ್ಶಿನಿ ಮೃತಪಟ್ಟಿದ್ದಳು.

Housewife Mandya 1

ಗಂಡ ಸೂರ್ಯನೇ ಕೊಲೆ ಮಾಡಿದ್ದಾನೆ ಎಂದು ದರ್ಶಿನಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯನ ಜತೆ ದರ್ಶಿನಿಗೆ ವಿವಾಹವಾಗಿತ್ತು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆಯೂ ದರ್ಶಿನಿಯನ್ನು ಸೂರ್ಯ ಮದುವೆಯಾಗಿದ್ದ.

Housewife Mandya 3

ಮದುವೆಯಾದ 4 ತಿಂಗಳಿಂದ ಸೂರ್ಯ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ನನ್ನ ಮಗಳಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ ಮತ್ತು ವರದಕ್ಷಿಣೆ ತರುವಂತೆ ಹಿಂಸೆ ಮಾಡುತ್ತಿದ್ದ. ಇದೀಗ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ. ಬದುಕಿ ಬಾಳಬೇಕಿದ್ದ ನಮ್ಮ ಮಗಳ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸೂರ್ಯ ಮತ್ತು ಆತನ ಕುಟುಂಬಸ್ಥರನ್ನ ಬಂಧಿಸಬೇಕು ಎಂದು ದರ್ಶಿನಿಯ ತಾಯಿ ಒತ್ತಾಯ ಮಾಡಿದ್ದಾರೆ.

Housewife Mandya 4

ಈ ಘಟನೆ ಸಂಬಂಧ ದರ್ಶಿನಿ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕೆಆರ್​ಎಸ್ ಠಾಣೆಗೆ ದರ್ಶಿನಿ ಕುಟುಂಬಸ್ಥರು ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net