ಕಂದಾಯ, ಅರಣ್ಯ ಇಲಾಖೆ ಕಾನೂನಿಗೆ ವಿರೋಧ

sri election bycot
ಮಸಿಗೆ ಗ್ರಾಮಸ್ಥರು ಪಡುಬೈಲು ಈಶ್ವರ ದೇವಾಲಯದ ಹೊರಾಂಗಣದಲ್ಲಿ ಪ್ರತಿಭಟನೆ ನಡೆಸಿ ಲೋಕಸಭಾ ಚುನಾವಣೆ ಬಹಿಷ್ಕರಿಸಲು ಸರ್ವಾನುಮತದಿಂದ ತೀರ್ಮಾನಿಸಿದರು. ಸತೀಶ್, ಇಂದಿರಾ, ಅನುಪ್, ಕುಶಲ, ಅಂಗುರ್ಡಿ ದಿನೇಶ್ ಇದ್ದರು.
Published on

ಶೃಂಗೇರಿ: ಕಂದಾಯ ಹಾಗೂ ಅರಣ್ಯ ಇಲಾಖೆಯ ಅವೈಜ್ಞಾನಿಕ ಕಾನೂನು ವಿರೋಧಿಸಿ ತಾಲೂಕಿನ ಮೆಣಸೆ ಗ್ರಾಪಂ ವ್ಯಾಪ್ತಿಯ ಮಸಿಗೆ ಗ್ರಾಮಸ್ಥರು ಪಡುಬೈಲು ಈಶ್ವರ ದೇವಾಲಯದ ಹೊರಾಂಗಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಲೋಕಸಭೆ ಚುನಾವಣೆ ಬಹಿಷ್ಕರಿಸಲು ಸರ್ವಾನುಮತದಿಂದ ತೀರ್ಮಾನಿಸಿದರು.
ಮಸಿಗೆ ಗ್ರಾಮದ ಕೃಷಿಕ ದಿನೇಶ್ ಅಂಗುರ್ಡಿ ಮಾತನಾಡಿ, ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಮೋಸ ಮಾಡಿದ್ದಾರೆ. ಬಳಿಕ ಪ್ರತಿ ಗ್ರಾಪಂನಲ್ಲಿ ನಡೆದ ಗ್ರಾಮಸಭೆಯಲ್ಲಿ ಜಮೀನು, ಮನೆಗಳು, ಕಾಲುದಾರಿ, ನೀರಿನ ಸೌಲಭ್ಯಗಳನ್ನು ಬಿಟ್ಟು ಮೀಸಲು ಅರಣ್ಯ ಎಂದು ಉದ್ಘೋಷಣೆ ಮಾಡುತ್ತೇವೆ ಎಂದು ಎಲ್ಲರಿಂದಲೂ ಅರ್ಜಿ ತೆಗೆದುಕೊಂಡಿದ್ದಾರೆ. ನಾವು ಸಲ್ಲಿಸಿದ ಅರ್ಜಿಗಳಿಗೆ ಸ್ಪಂದಿಸದೆ ಕಚೇರಿಯಲ್ಲಿ ಕುಳಿತು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸಮಸ್ಯೆಗಳ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ. ಸಮಾಜದ ಕಟ್ಟಕಡೆಯ ಜನರಿಗೆ ನಮ್ಮ ಸೇವೆ ಎನ್ನುವ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಹಾಗಾಗಿ ನಾವೆಲ್ಲರೂ ಸರ್ವಾನುಮತದಿಂದ ಮುಂದಿನ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ನಮ್ಮ ಹಿರಿಯರು ಇಲ್ಲಿಯೆ ಬದುಕು ಕಟ್ಟಿಕೊಂಡವರು. ಜಾನುವಾರುಗಳಿಗೆ ದರಗು ಒಣ ಎಲೆ ಸಂಗ್ರಹಿಸಲು ಜಮೀನಿನ ಸಮೀಪ ಇರುವ ಜಾಗವನ್ನು ಹಲವು ವರ್ಷಗಳಿಂದ ಎಲ್ಲ ರೈತರು ಉಪಯೋಗಿಸುತ್ತಿದ್ದರು. ಆದರೆ ಅಧಿಕಾರಿಗಳ ದೃಷ್ಟಿಯಲ್ಲಿ ಅದು ಸೊಪ್ಪಿನಬೆಟ್ಟ ಎಂದು ಉಲ್ಲೇಖಿಸಲಾಗಿದೆ. ನಮಗೆ ಚುನಾವಣೆಗಿಂತ ನಮ್ಮ ಬದುಕು ರೂಪಿಸಿಕೊಳ್ಳುವುದು ಮುಖ್ಯ. ಚುನಾವಣೆಯ ಸಮಯ ಮತ ಹಾಕಿದರೆ ಮಾತ್ರ ಸರ್ಕಾರ ರಚನೆಯಾಗಲು ಸಾಧ್ಯ ಎಂಬುದನ್ನು ಜನಪ್ರತಿನಿಧಿಗಳು ಮೊದಲು ಅರಿತುಕೊಳ್ಳಬೇಕಿದೆ ಎಂದರು.
ನಮ್ಮ ಸಮಸ್ಯೆಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಳಜಿ ವಹಿಸಲಿಲ್ಲ. ಈಗಾಗಲೇ ಮೀಸಲು ಅರಣ್ಯ ಎಂದು ಜಾಗವನ್ನು ಗುರುತಿಸಿ ಹೋಗಿದ್ದಾರೆ. ಒಂದು ವೇಳೆ ನಾವು ಇರುವ ಜಾಗ ಮೀಸಲು ಅರಣ್ಯ ಎಂದು ಉದ್ಘೋಷಣೆಯಾದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಮುಂಬರುವ ಎಲ್ಲ ಚುನಾವಣೆಯನ್ನು ನಾವು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಗ್ರಾಮಸ್ಥರಾದ ಕಾನುವಳ್ಳಿ ಕೃಷ್ಣಪ್ಪಗೌಡ, ಕೆರೆಮನೆ ಭರತ್ ರಾಜ್, ಸಸಿಮನೆ ಶಿವಶಂಕರ್, ವಿಜಯ, ಕಾನುವಳ್ಳಿ ಶಾರದಮ್ಮ, ಜ್ಯೋತಿ, ಚಿತ್ರಾ, ಪ್ರೇಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net