

ಮುಂಬೈ: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಲಾಕ್ಡೌನ್ ಘೋಷಣೆ ಮಾಡಿಕೊಂಡಿವೆ. ಅದರಂತೆ ಮಹಾರಾಷ್ಟ್ರದಲ್ಲೂ ಲಾಕ್ಡೌನ್ ಜಾರಿಯಲ್ಲಿದೆ. ಈ ಲಾಕ್ಡೌನ್ ಈ ತಿಂಗಳ ಅಂತ್ಯದವರೆಗೂ ಮುಂದುವರಿಯಬಹುದು ಎಂದು ಮಹಾರಾಷ್ಟ್ರದ ರಾಜ್ಯ ಸಚಿವರು ತಿಳಿಸಿದ್ದಾರೆ.
ಕರೊನಾ ಸೋಂಕಿನ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಆಗಾಗ ಕ್ಯಾಬಿನೆಟ್ ಸಭೆ ನಡೆಸಲಾಗುತ್ತಿದೆ. ಅದರಂತೆ ಬುಧವಾರದಂದೂ ಸಭೆ ನಡೆದಿದ್ದು, ಅದರಲ್ಲಿ ಲಾಕ್ಡೌನ್ ವಿಚಾರವಾಗಿ ಮತ್ತೆ ಚರ್ಚೆಯಾಗಿದೆ. ಬಹುತೇಕರು ಲಾಕ್ಡೌನ್ ವಿಸ್ತರಣೆ ಅತ್ಯಗತ್ಯ ಎನ್ನುವ ಸಲಹೆ ನೀಡಿದ್ದಾರೆ. ಎಲ್ಲರ ಸಲಹೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಲಾಕ್ಡೌನ್ ಅನ್ನು ಮೇ 31ರವರೆಗೆ ಮುಂದುವರಿಸುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಇಂದು 46,781 ಪ್ರಕರಣ ದಾಖಲಾಗಿದ್ದರೆ 816 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ. 17.36ರಷ್ಟಿದ್ದರೆ ಮರಣ ಪ್ರಮಾಣ ಶೇ. 1.49ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. (ಏಜೆನ್ಸೀಸ್)