

ನವದೆಹಲಿ: ಕರೊನಾ ವೈರಸ್ ನಿಯಂತ್ರಣ ಕ್ರಮ ಹಾಗೂ ಲಾಕ್ಡೌನ್ ಕುರಿತ ಪರಾಮರ್ಶೆಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭವಾಗಲಿದೆ.
ಇದು ಭಾರತದಲ್ಲಿ ಲಾಕ್ಡೌನ್ ಜಾರಿಯಾದ ಬಳಿಕ ಮೋದಿ ಸಿಎಂಗಳ ಜತೆ ನಡೆಸುತ್ತಿರುವ 3ನೇ ಸಭೆಯಾಗಿದೆ. ಮಹಾರಾಷ್ಟ್ರ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಗಂಭೀರಗೊಂಡಿರುವುದರಿಂದ ಐದಕ್ಕೂ ಹೆಚ್ಚು ರಾಜ್ಯಗಳು ಲಾಕ್ಡೌನ್ ವಿಸ್ತರಣೆ ಬೇಡಿಕೆಯನ್ನು ಪ್ರಧಾನಿ ಮುಂದಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜತೆಗೆ ಏಪ್ರಿಲ್ 20ರ ಬಳಿಕ ಕೆಲ ಪ್ರದೇಶಗಳಲ್ಲಿನ ನಿರ್ಬಂಧ ಸಡಿಲಿಸಿರುವ ಬಗ್ಗೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ, ರಕ್ಷಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.
ಕೈ ರಾಜ್ಯಗಳ ಆಕ್ಷೇಪ: ಲಾಕ್ಡೌನ್ ನಿಯಮಗಳ ಕುರಿತಂತೆ ಕಾಂಗ್ರೆಸ್ ಆಡಳಿತ ರಾಜ್ಯಗಳು ಈಗಾಗಲೇ ಆಕ್ಷೇಪ ಎತ್ತಿವೆ. ಅನುದಾನ, ಪ್ಯಾಕೇಜ್ ನೀಡದ ಹೊರತು ಕರೊನಾ ವಿರುದ್ಧದ ಹೋರಾಟ ಸಫಲವಾಗದೆಂದು ಈಗಾಗಲೇ ಕಾಂಗ್ರೆಸ್ನ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದಾರೆ.