ಲೋಕಲ್​ನಲ್ಲಿ ಕೈಕಮಾಲ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೇಲುಗೈ

Front Election
Published on

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ನಗರ ಪ್ರದೇಶದ ಮತದಾರರ ಒಲವು-ನಿಲುವು ಅರಿಯಲು ಅತಿಮುಖ್ಯ ಎಂದೇ ವ್ಯಾಖ್ಯಾನಿಸಲಾಗುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಆದರೂ ಒಂದರ್ಥದಲ್ಲಿ ಕಾಂಗ್ರೆಸ್ಸೂ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್​ಗೆ ಈ ಫಲಿತಾಂಶ ದೊಡ್ಡ ಪಾಠ ಕಲಿಸಿದೆ.

ಇದೇ ತಿಂಗಳಲ್ಲಿ ಬಂದ ಮೇಲ್ಮನೆ ಚುನಾವಣೆ ಫಲಿತಾಂಶ ಬೆನ್ನ ಹಿಂದೆಯೇ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಬಿಜೆಪಿಯಲ್ಲಿ ಆತಂಕ ತಂದಿದ್ದರೆ, ಸ್ವಲ್ಪ ಮುನ್ನಡೆ ಸಾಧಿಸಿರುವುದು ಕಾಂಗ್ರೆಸ್​ನಲ್ಲಿ ಮುಂದಿನ ಚುನಾವಣೆ ಸಿದ್ಧತೆಯ ಹುರುಪು ಹೆಚ್ಚಿಸಿದೆ. ಜೆಡಿಎಸ್​ಗಂತೂ ಭಾರಿ ನಷ್ಟವಾಗಿದೆ. ಆಮ್ ಆದ್ಮಿ ಪಕ್ಷ ಒಂದು ಸ್ಥಾನ ಗೆಲ್ಲುವುದರೊಂದಿಗೆ ಹೆಜ್ಜೆ ಇಡಲಾರಂಭಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿಸಿಕೊಂಡಿದ್ದವು. ಉಭಯ ಪಕ್ಷಗಳ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು. ವಾಕ್ಸಮರ, ರಾಜಕೀಯ ಕೆಸರೆರಚಾಟವೂ ನಡೆದಿತ್ತು. ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ಸನ್ನೇ ಗುರಿಯಾಗಿಸಿಕೊಂಡಿದ್ದವು. ಬಿಜೆಪಿ ಬಗೆಗಿನ ಜೆಡಿಎಸ್​ನ ಸಾಫ್ಟ್ ಕಾರ್ನರ್ ಢಾಳಾಗಿ ಕಾಣಿಸಿತ್ತು. ಇದನ್ನೇ ಕಾಂಗ್ರೆಸ್ ಅಸ್ತ್ರವಾಗಿಸಿಕೊಂಡಿದ್ದು ಜೆಡಿಎಸ್​ಗೆ ಮಗ್ಗುಲ ಮುಳ್ಳಾಯಿತು.

ಸಿಎಂಗೆ ಮುಖಭಂಗ: ಮುಖ್ಯಮಂತ್ರಿ ತವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 14 ವಾರ್ಡ್​ಗಳಲ್ಲಿ ಜಯಶಾಲಿಯಾದರೆ, ಬಿಜೆಪಿ 7 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಹಾವೇರಿ ಜಿಲ್ಲೆ ಗುತ್ತಲ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಲ್ಲಿ ಕಾಂಗ್ರೆಸ್ 11, ಬಿಜೆಪಿ 6 ಹಾಗೂ ಪಕ್ಷೇತರ 1 ಸ್ಥಾನ ಗೆದ್ದಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗೆ ತವರು ಜಿಲ್ಲೆ ಕಹಿ ಉಣಿಸಿದೆ. ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿ ಬಿಜೆಪಿಗೆ ಮುಖಭಂಗವಾಗಿತ್ತು. ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವ ಸಂದರ್ಭದಲ್ಲಿಯೇ ಹಾವೇರಿ ಜಿಲ್ಲೆಯಲ್ಲಿನ ಎರಡನೇ ಸೋಲು ಮುಖ್ಯಮಂತ್ರಿಗೆ ಆತಂಕದ ವಿಚಾರವೇ ಆಗಿದೆ. ಅನೇಕ ಸಚಿವರು, ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಿದ್ದಕ್ಕಿಂತ ಕಳೆದುಕೊಂಡಿರುವುದೇ ಹೆಚ್ಚು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಖಚಿತ ಎಂಬುದನ್ನು ಈ ಫಲಿತಾಂಶ ಹೇಳಿದೆ. ಹಣವೊಂದೇ ಸಾಕಾಗಲ್ಲ. ಜನಪರ ಕೆಲಸ ಮಾಡಬೇಕು, ಪ್ರಾಮಾಣಿಕ ಆಡಳಿತ ಕೊಡಬೇಕು. ಆಗ ಜನ ಮತ ನೀಡುತ್ತಾರೆ ಎಂಬುದು ಸಾಬೀತಾಗಿದೆ. ಬಿಜೆಪಿಯ ಬುಡ ಅಲುಗಾಡಿದೆ. | ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ

ಗ್ರಾಮಪಂಚಾಯಿ ಫಲಿತಾಂಶ ಪ್ರಕಟ: ನಾನಾ ಕಾರಣಗಳಿಂದ ತೆರವಾಗಿರುವ, ಅವಧಿ ಮುಕ್ತಾಯವಾಗುವ, ನ್ಯಾಯಾಲಯ ಪ್ರಕರಣಗಳಿಂದ ಸದಸ್ಯರು ಆಯ್ಕೆಯಾಗದ 1,264 ಗ್ರಾಪಂ ಸದಸ್ಯ ಸ್ಥಾನಗಳ ಚುನಾವಣೆ ಫಲಿತಾಂಶವೂ ಹೊರಬಿದ್ದಿದೆ. ಗ್ರಾಪಂಗೆ ಯಾವುದೇ ಪಕ್ಷದ ಚಿಹ್ನೆಯಿಂದ ಚುನಾವಣೆ ನಡೆಯದಿರುವುದರಿಂದ ಇಂತಹ ಪಕ್ಷ ಇಷ್ಟೇ ಸ್ಥಾನದಲ್ಲಿ ಗೆಲುವು ಸಾಧಿಸಿದೆ ಎಂದು ಹೇಳುವುದು ಕಷ್ಟ.

ಎಲ್ಲೆಲ್ಲಿ ಚುನಾವಣೆ?: 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. 2019ರಲ್ಲಿ ಅವಧಿ ಪೂರ್ಣಗೊಂಡ ಚಿಕ್ಕಮಗಳೂರು, ಗದಗ-ಬೆಟಗೇರಿ, ಹೊಸಪೇಟೆ, ಶಿರಾ ನಗರಸಭೆ ಮತ್ತು ಅಥಣಿ, ಅಣ್ಣಿಗೇರಿ ಮತ್ತು ಬಂಕಾಪುರ ಪುರಸಭೆಗಳು ಹಾಗೂ 2021ನೇ ಸಾಲಿನಲ್ಲಿ ಅವಧಿ ಮುಕ್ತಾಯವಾಗಿರುವ 51 ನಗರ ಸ್ಥಳೀಯ ಸಂಸ್ಥೆಗಳ 1184 ವಾರ್ಡ್​ಗಳಿಗೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದುಕೊಂಡಿದೆ.

ಹೇಗಿದೆ ಒಳನೋಟ?: ನೂತನ ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದು, ಉಸ್ತುವಾರಿ ಸಚಿವ ಆನಂದ್ ಸಿಂಗ್​ಗೆ ಹಿನ್ನಡೆಯಾಗಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ನಗರಸಭೆಯ 35 ಸ್ಥಾನಗಳಲ್ಲಿ 12 ಸ್ಥಾನ ಕಾಂಗ್ರೆಸ್, 10 ಬಿಜೆಪಿ ಗೆಲುವು ಸಾಧಿಸಿದ್ದರೆ, 1 ಎಎಪಿ ಹಾಗೂ 12 ಪಕ್ಷೇತರರು ಗೆಲುವು ಪಡೆದಿದ್ದಾರೆ. ಹಾಗಾಗಿ ಯಾವುದೇ ಪಕ್ಷ ಇಲ್ಲಿ ಅಧಿಕಾರ ಹಿಡಿಯಲು ಪಕ್ಷೇತರರ ಬೆಂಬಲ ಅನಿವಾರ್ಯ. ಹಗರಿಬೊಮ್ಮನಹಳ್ಳಿ ಪುರಸಭೆಯ 23 ಸ್ಥಾನಗಳಲ್ಲಿ 12 ಕಾಂಗ್ರೆಸ್, 11 ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಲ್ಪಮುನ್ನಡೆ ಸಾಧಿಸಿದೆ. ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ 18 ಸ್ಥಾನಗಳಲ್ಲಿ 13 ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಇಲ್ಲಿ ಒಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಅತಂತ್ರರ ನೆರವು ಅನಿವಾರ್ಯ: ಕೆಲವೆಡೆ ಪಕ್ಷೇತರರ ಪ್ರಾಬಲ್ಯವೂ ಹೆಚ್ಚಿದ್ದು, ಅತಂತ್ರ ಸ್ಥಿತಿ ನಿರ್ವಣವಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಕರೆಕುಪ್ಪೆ ಪುರಸಭೆಯಲ್ಲಿ 6 ಮಂದಿ ಪಕ್ಷೇತರರು ಗೆದ್ದಿದ್ದು, ಯಾವುದೇ ಪಕ್ಷ ಅಧಿಕಾರ ಹಿಡಿಯಲು ಪಕ್ಷೇತರರ ಅವಶ್ಯಕತೆ ಎದುರಾಗಿದೆ. ಇದೇ ಪರಿಸ್ಥಿತಿ ಇನ್ನೂ ಹಲವು ಕಡೆ ಇದೆ.

ಎಲ್ಲವೂ ಪಕ್ಷೇತರರ ಪಾಲು!: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕು ನಾಗನೂರು ಪಟ್ಟಣ ಪಂಚಾಯಿತಿಯ 17 ಸ್ಥಾನಗಳಲ್ಲಿ ಎಲ್ಲವೂ ಪಕ್ಷೇತರರ ಪಾಲಾಗಿವೆ! ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕು ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯ 14 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ. ಹೊಸಪೇಟೆ ನಗರಸಭೆಯ 35 ಸ್ಥಾನಗಳಲ್ಲಿ 12 ಕಾಂಗ್ರೆಸ್, 10 ಬಿಜೆಪಿ, 1 ಎಎಪಿ ಗೆಲುವು ಸಾಧಿಸಿದರೆ, 12 ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳು

  • ಕಾಂಗ್ರೆಸ್- 501
  • ಬಿಜೆಪಿ-433
  • ಜೆಡಿಎಸ್-45
  • ಜನತಾ ಪಕ್ಷ 1
  • ಎಎಪಿ 1
  • ಎಐಎಂಐಎಂ-2
  • ಎಸ್​ಡಿಪಿಐ-6
  • ಪಕ್ಷೇತರರು-195
  • ಒಟ್ಟು ವಾರ್ಡ್-1184
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net