ಧ್ಯಾನ ಮಾರ್ಗದಿಂದ ಬದುಕು ಸಾರ್ಥಕ್ಯ

sor dharmika
ಸೊರಬ ತಾಲೂಕಿನ ಜಡೆ ಬಂಕಸಾಣದಲ್ಲಿ ಆಯೋಜಿಸಿದ್ದ ಸದ್ಭಾವನಾ ಯಾತ್ರೆಯ ಧ್ಯಾನ ದಿನಾಚರಣೆಯಲ್ಲಿ ಬಿ.ಸಿ.ಪೂಜಾರ್ ದಂಪತಿಗೆ ಗುರುರಕ್ಷೆ ನೀಡಲಾಯಿತು. ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ರಾಜೇಶ್ವರಿ ಪುರಾಣಿಕ, ಸುರೇಶ ಇತರರಿದ್ದರು.
Published on

ಸೊರಬ: ಬದುಕು ಸಾರ್ಥಕವಾಗಲು ಧ್ಯಾನ ಮಾರ್ಗವನ್ನು ಅವಲಂಬಿಸಬೇಕು ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಜಡೆ ಬಂಕಸಾಣದ ವರದಾ ಉತ್ತರ ವಾಹಿನಿಯ ಸಮಾಧಾನ ಪರಿಸರದಲ್ಲಿ ಶ್ರೀ ಸದ್ಗುರು ಸೇವಾಟ್ರಸ್ಟ್‌ನ ಸದ್ಭಾವನಾ ಯಾತ್ರೆಯ ಧ್ಯಾನ ದಿನಾಚರಣೆಯಲ್ಲಿ ಆಶೀರ್ವಚನ ನೀಡಿದರು.

ಜೀವನದ ಪ್ರತಿ ಕ್ಷಣದಲ್ಲೂ ನಮಗೆ ಧ್ಯಾನದ ಅನುಭವವಾಗುತ್ತದೆ. ಉಡುವಾಗ, ಉಣ್ಣುವಾಗ, ತೊಡುವಾಗ, ತೋರಿಸುವಾಗ, ನಡೆಯುವಾಗ, ನಲಿಯುವಾಗ ನಮಗೆ ಧ್ಯಾನದ ಅನುಭೂತಿ ಆಗುತ್ತದೆ. ಅದನ್ನೇ ಆಡುಭಾಷೆಯಲ್ಲಿ ಏಕಾಗ್ರತೆ ಅಥವಾ ಲಕ್ಷೃ ಎಂದು ಕರೆಯುತ್ತಾರೆ. ಆದರೆ ಈ ಏಕಾಗ್ರತೆ ಕ್ಷಣಿಕವಾಗಿರಬಾರದು. ಅದು ಅಧ್ಯಾತ್ಮದ ಹಿನ್ನೆಲೆ ಇರುವವರಿಗೆ ನಿರಂತರವಾಗಿರುತ್ತದೆ ಎಂದರು.

ನಿಸರ್ಗದ ಪ್ರತಿ ಜೀವರಾಶಿಗಳೂ ಧ್ಯಾನದ ಅನುಭವ ಮಾಡಿಕೊಳ್ಳುತ್ತವೆ. ಪ್ರಾಣಿಗಳು ಆಹಾರ ಸಂಗ್ರಹಿಸುವಾಗ ಅತ್ಯಂತ ಏಕಾಗ್ರತೆ ಹೊಂದಿರುತ್ತವೆ. ತನ್ಮಯತೆ ಇದ್ದಾಗ ಮಾತ್ರ ಆಹಾರ ಸಿಗುತ್ತದೆ. ಹಾಗೆಯೇ ನಮ್ಮ ಜೀವನದಲ್ಲಿ ಕ್ಷಣಿಕವಾಗಿ ಅನುಭವಕ್ಕೆ ಬರುವ ತನ್ಮಯಾತೆ, ಏಕಾಗ್ರತೆ ಧ್ಯಾನದ ಸಾಧನೆಗೆ ಪ್ರಾಥಮಿಕ ಹಂತಗಳು ಎಂದು ತಿಳಿಸಿದರು.

ಗುರು ರಕ್ಷೆ ಸ್ವೀಕರಿಸಿ ಮಾತನಾಡಿದ ಧಾರವಾಡದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಸಿ.ಪೂಜಾರ್ ಬೀದರಕೋಟೆಮಠ, ಬದುಕಿನಲ್ಲಿ ಏನೆಲ್ಲಾ ಸಿಗಬಹುದು. ಆದರೆ ಗುರುಕೃಪೆ ಸಿಗುವುದು ಕಷ್ಟ. ಅದು ಸಿಗುವುದು ಪೂರ್ವಜನ್ಮದ ಪುಣ್ಯ ಎಂದರು.

ಹಾನಗಲ್ ತಾಲೂಕಿನ ಸಿವಿಲ್ ನ್ಯಾಯಾಧೀಶೆ ರಾಜೇಶ್ವರಿ ಪುರಾಣಿಕ ಮಠನುಡಿಸೇವೆ ಸಲ್ಲಿಸಿದರು. ವೆಸ್ಟ್‌ಇಂಡಿಸ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ ಬೀದರಕೋಟೆ ಮಠ ದಂಪತಿಯ ಮಕ್ಕಳಿಗೆ ಶಿವದೀಕ್ಷೆ ಸಂಸ್ಕಾರ ನೆರವೇರಿತು. ಎಸ್.ಕೆ.ಹಿರೇಮಠ, ಶಿವಕುಮಾರ್ ಹಿರೇಮಠ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net