

ಅಹಮದಾಬಾದ್: ಗುಜರಾತ್ ಹೈಕೋರ್ಟ್ ದೇಶದಲ್ಲಿ ಇದೇ ಮೊದಲ ಬಾರಿಗೆ ಕೋರ್ಟ್ ಕಲಾಪವನ್ನು ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ನೇತೃತ್ವದ ವಿಚಾರಣೆ ಸೋಮವಾರದಿಂದಲೇ ಯೂಟ್ಯೂಬ್ನಲ್ಲಿ 5 ಗಂಟೆಗೂ ಅಧಿಕ ಕಾಲ ನೇರಪ್ರಸಾರವಾಗಿದೆ.
ಇಂದು ಪ್ರಾಯೋಗಿಕ ಪ್ರಸಾರ ನಡೆದಿದ್ದು, ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಸಾರ ಮಾಡುವ ಚಿಂತನೆಯಲ್ಲಿದೆ ಹೈಕೋರ್ಟ್. ಕಲಾಪಗಳನ್ನು ನೇರ ಪ್ರಸಾರ ಮಾಡುವ ವಿಧಾನವನ್ನು ಮುಂದುವರಿಸುವ ಅಥವಾ ಅಳವಡಿಸಿಕೊಳ್ಳುವ ಕುರಿತು ಪ್ರಾಯೋಗಿಕ ಪ್ರಸಾರದ ಫಲಿತಾಂಶದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೈಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಾರ್ವಜನಿಕರಿಗೆ ವಿಚಾರಣೆಗಳನ್ನು ವೀಕ್ಷಿಸಲು ಅವಕಾಶ ನೀಡಬೇಕು ಎಂಬ ಸುಪ್ರೀಂಕೋರ್ಟ್ನ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ನ ಎಲ್ಲ ಪೀಠಗಳು ಕಳೆದ ಮಾರ್ಚ್ನಿಂದಲೇ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ವಿಚಾರಣೆ ನಡೆಸುತ್ತಿವೆ. ವಿಚಾರಣೆ ಮರುವೀಕ್ಷಣೆಗೆ ಮೇಲಿನ ವಿಡಿಯೋ ಲಿಂಕ್ ಕ್ಲಿಕ್ಕಿಸಬಹುದು. (ಏಜೆನ್ಸೀಸ್)