

ತ್ಯಾಗರ್ತಿ: ಗ್ರಾಮೀಣ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ ಎಂದು ಅಬಸೆ ಗ್ರಾಮ ಸಮಿತಿ ಅಧ್ಯಕ್ಷ ಮಧುಸೂಧನ್ ಹೇಳಿದರು. ಸಮೀಪದ ಅಬಸೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕೊಪ್ಪ ಕಾರ್ಯಕ್ಷೇತ್ರದ ಹಿಮಗಿರಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಶ್ರೀಕ್ಷೇತ್ರದಿಂದ ಹಳ್ಳಿಯ ಕೆರೆಕಟ್ಟೆಗಳ ಸ್ವಚ್ಛತೆ, ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ, ಮಹಿಳೆಯರಿಗೆ ಉಳಿತಾಯ ಮನೋಭಾವನೆ ಇತರೆ ಕಾರ್ಯಕ್ರಮಗಳು ಹಳ್ಳಿಯ ಜನರಿಗೆ ಉಪಯೋಗವಾಗಿವೆ ಎಂದು ಹೇಳಿದರು. ಮಹಿಳೆಯರಿಂದ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಗೌರಮ್ಮ, ಮೇಲ್ವಿಚಾರಕ ಧರ್ಮಪ್ಪ, ಕೃಷಿ ಅಧಿಕಾರಿ ಕೃಷ್ಣಮೂರ್ತಿ, ಒಕ್ಕೂಟದ ಅಧ್ಯಕ್ಷೆ ಕಮಲಾಕ್ಷಿ, ಅಂಗನವಾಡಿ ಶಿಕ್ಷಕಿ ಸರೋಜಮ್ಮ, ಸೇವಾ ಪ್ರತಿನಿಧಿಗಳಾದ ಗುತ್ಯಮ್ಮ, ಯಮುನಾ, ಗಾಯತ್ರಿ ಇತರರಿದ್ದರು.