

ಸೊರಬ: ಪಟ್ಟಣ ಸೇರಿ ತಾಲೂಕಿನಾದ್ಯಂತ ರಂಜಾನ್ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಈ ತಿಂಗಳಿನಲ್ಲಿ ಮುಸ್ಲಿಮರಿಗೆ ಉಪವಾಸ ವ್ರತ ಅತ್ಯಂತ ಮಹತ್ವದ್ದು. ಹಬ್ಬದಾಚರಣೆ ಮೂಲಕ ವ್ರತವನ್ನು ಅಂತ್ಯಗೊಳಿಸಲಾಯಿತು.
ಪಟ್ಟಣದ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಇದಕ್ಕೂ ಮೊದಲು ಮಸೀದಿಯಿಂದ ಮುಖ್ಯರಸ್ತೆ ಮಾರ್ಗವಾಗಿ ಈದ್ಗಾ ಮೈದಾನದವರೆಗೆ ಮೆರವಣಿಗೆ ನಡೆಸಿದರು.
ಚಂದ್ರಗುತ್ತಿ ಗ್ರಾಮದಲ್ಲಿ ಜಾಮಿಯಾ ಮಸೀದಿಯಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಏಕಕಾಲಕ್ಕೆ ಪ್ರಾರ್ಥನೆ ಮಾಡಿದರು. ಚಂದ್ರಗುತ್ತಿ ಮಸೀದಿ ಧರ್ಮ ಗುರು ಆಸಿಫ್ ರಶಾದಿ ಹಬ್ಬದ ಸಂದೇಶ ನೀಡಿದರು. ದಾನ, ಧರ್ಮದ ಮಹತ್ವದ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದದಿಂದ ಬಾಳಬೇಕು ಎಂದು ತಿಳಿಸಿದರು.