

Live Birth : ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹಾಗೂ ವಿಡಿಯೋ ಗೇಮ್ ಸ್ಟ್ರೀಮರ್ ಫ್ಯಾಂಡಿ, ತಮ್ಮ ಫಾಲೋವರ್ಸ್, ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ಮಗುವಿಗೆ ಜನ್ಮ ನೀಡುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರ ಮಾಡಿದ್ದಾರೆ.
ಈ ಲೈವ್ ವಿಡಿಯೋವನ್ನು ಆಪ್ತ ಸ್ನೇಹಿತರು, ಸಂಬಂಧಿಕರು ಮತ್ತು ಪ್ರಪಂಚದಾದ್ಯಂತದ ಇರುವ ಅವರ ಫಾಲೋವರ್ಸ್ಗಳು ವೀಕ್ಷಣೆ ಮಾಡಿದ್ದಾರೆ. ಹೆರಿಗೆ ನೋವು ಪ್ರಾರಂಭವಾದಾಗಿನಿಂದ ಮಗು ಹೊರಬರುವವರೆಗಿನ ದೃಶ್ಯಗಳನ್ನು ನೇರಪ್ರಸಾರ ಮಾಡಲಾಯಿತು. ಸಾವಿರಾರು ಜನರು ಹೆರಿಗೆಯನ್ನು ಲೈವ್ ಆಗಿ ವೀಕ್ಷಿಸಿದರು.
ಫ್ಯಾಂಡಿ ಅವರ ಮನೆಯೊಳಗೆ ಹೆರಿಗೆಗಾಗಿ ವಿಶೇಷ ಕೋಣೆಯೊಂದನ್ನು ವ್ಯವಸ್ಥೆ ಮಾಡಲಾಗಿತ್ತು. ವೈದ್ಯರ ಸೇವೆ ಮತ್ತು ಹೆರಿಗೆಯ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಹೆರಿಗೆಯ ವೇಳೆ ಫ್ಯಾಂಡಿ ಸುತ್ತಮುತ್ತ ಇದ್ದ ಆಕೆಯ ಆಪ್ತರು ಆಕೆಯನ್ನು ಪ್ರೋತ್ಸಾಹಿಸುತ್ತಲೇ ಇದ್ದರು. ಆಕೆಯ ಪತಿ ಆಡಮ್ ಯಾವಾಗಲೂ ಆಕೆಗೆ ಸಾಂತ್ವನದ ಮಾತುಗಳನ್ನು ಆಡುತ್ತಾ ಆಕೆಯ ಪಕ್ಕದಲ್ಲೇ ಇದ್ದರು. ಹೆರಿಗೆ ಯಶಸ್ವಿಯಾಗಿದ್ದು, ಆ ಬಳಿಕ ಎಲ್ಲರೂ ತಾಯಿಯನ್ನು ಅಭಿನಂದಿಸಿದರು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ವರದಿಯಾಗಿದೆ.
ಅಂದಹಾಗೆ, ಫ್ಯಾಂಡಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ತಾನು ಮಗುವಿಗೆ ಜನ್ಮ ನೀಡುವುದನ್ನು ನೇರಪ್ರಸಾರ ಮಾಡಲಿದ್ದೇನೆ ಎಂದು ಮೊದಲೇ ತಿಳಿಸಿದ್ದರು. ಅದರಂತೆ, ನೇರಪ್ರಸಾರವು ಸುಮಾರು ಎಂಟು ಗಂಟೆಗಳ ಕಾಲ ನಡೆಯಿತು. ವಿಶ್ವದಲ್ಲಿಯೇ ಮೊದಲ ಬಾರಿಗೆ ಇಂತಹ ನೇರಪ್ರಸಾರ ಮಾಡಲಾಗಿದೆ ಎಂದು ವರದಿಯಾಗಿದೆ. ಇಂತಹ ವಿಡಿಯೋ ಮಾಡಲು ಧೈರ್ಯ ಮಾಡಿದ್ದಕ್ಕಾಗಿ ಫ್ಯಾಂಡಿಗೆ ಪ್ರಶಂಸೆಗಳ ಸುರಿಮಳೆಯಾಗಿದೆ. ಇನ್ನೊಂದೆಡೆ, ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ವೀವ್ಸ್ ಮತ್ತು ಲೈಕ್ಸ್ಗಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
30 ವರ್ಷದ ಫ್ಯಾಂಡಿ, ಅಮೆರಿಕದ ಟೆಕ್ಸಾಸ್‌ನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಫ್ಯಾಂಡಿ ಎಂದು ಕರೆಯಲಾಗಿದ್ದರೂ, ಅವರ ನಿಜವಾದ ಹೆಸರು ಕ್ಯಾಡಿ. ಅವರು 2015 ರಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿದರು. ಫ್ಯಾಂಡಿ ಅವರು ಮಗುವಿಗೆ ಜನ್ಮ ನೀಡುವುದನ್ನು ನೇರ ಪ್ರಸಾರ ಮಾಡುವುಕ್ಕೂ ಮುಂಚೆಯೇ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರು. ಹೆರಿಗೆಯ ನಂತರ, ಅವರ ಅನುಯಾಯಿಗಳ ಸಂಖ್ಯೆ ಮತ್ತೆ ಗಗನಕ್ಕೇರಿದೆ. (ಏಜೆನ್ಸೀಸ್)