

Viral Cheque: ಕಳೆದ ಕೆಲವು ದಿನಗಳ ಹಿಂದಷ್ಟೇ ಶಾಲೆಯ ಶಿಕ್ಷಕರೊಬ್ಬರು ಬರೆದ ಚೆಕ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಹಲವರ ನಗುವಿಗೆ ಕಾರಣವಾಗಿತ್ತು. ಕೆಲವರು ಹಾಸ್ಯವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಇದನ್ನು ಟೀಕಿಸಿದ್ದರು. ಚೆಕ್ ಸರಿಯಾಗಿ ಬರೆಯುವಲ್ಲಿ ಶಿಕ್ಷಕರೇ ಇಷ್ಟೊಂದು ತಪ್ಪು ಮಾಡಿದ್ರೆ ಇನ್ನೂ ವಿದ್ಯಾರ್ಥಿಗಳ ಕಥೆಯೇನು? ಎಂದು ಪ್ರಶ್ನಿಸಿದ್ದರು. ಚೆಕ್ನ ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ಶಿಕ್ಷಕನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಶಾಲಾ-ಕಾಲೇಜುಗಳಲ್ಲಿ ಕೆಲವೊಂದು ಉದ್ದೇಶಪೂರ್ವಕವಾಗಿ ಮಾಡಿದ್ದಾದರೆ, ಇನ್ನೂ ಕೆಲವು ಸಣ್ಣ ಎಡವಟ್ಟಿನಿಂದ ಆಗಿರುತ್ತವೆ. ಅಸಲಿಗೆ ಹಿಮಾಚಲ ಪ್ರದೇಶದ ಸಿರಮೌರ್ನ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಪ್ರಾಂಶುಪಾಲರೂ ಆದ ವ್ಯಕ್ತಿಯೊಬ್ಬರು, 7,616 ರೂ. ಮೊತ್ತವನ್ನು ಚೆಕ್ನಲ್ಲಿ ಅಕ್ಷರಗಳಲ್ಲಿ ಬರೆಯಬೇಕು. ಇದನ್ನು ಆಂಗ್ಲದಲ್ಲಿ ‘Seven Thousand Six Hundred Sixteen Rupees Only’ ಎಂದು ಸರಿಯಾಗಿ ಬರೆಯಬೇಕಿತ್ತು. ಆದರೆ, ಪ್ರಾಂಶುಪಾಲರು, ‘Saven Thursday Six Harendra Sixty Rupees Only’ ಎಂದು ಬರೆದು, ಸಹಿ ಹಾಕಿಕೊಟ್ಟಿದ್ದರು. ಇದೇ ಆಗಿದ್ದು ಎಡವಟ್ಟು.
ಈ ಚೆಕ್ ನೋಡಿದ ಶಾಲೆಯ ಸಿಬ್ಬಂದಿಯೊಬ್ಬರು, ಅದರ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಕೆಲವೇ ನಿಮಿಷಗಳಲ್ಲಿ ವೈರಲ್ ಆದ ಫೋಟೋಗೆ ನೆಟ್ಟಿಗರು ವ್ಯಾಪಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಹೇಗೆ ಒಬ್ಬ ಪ್ರಾಂಶುಪಾಲರು ಹೀಗೆ ತಪ್ಪಾಗಿ ಬರೆಯಲು ಸಾಧ್ಯ ಎಂದೆಲ್ಲ ಕಮೆಂಟ್ ಮಾಡಿದ್ದರು. ಈ ತಪ್ಪನ್ನು ಒಪ್ಪದ ರಾಜ್ಯ ಶಿಕ್ಷಣ ಇಲಾಖೆಯೂ ಇದು "ಗಂಭೀರ ಮತ್ತು ಸ್ವೀಕಾರಾರ್ಹವಲ್ಲ" ಎಂದು ಹೇಳಿ, ಶಿಕ್ಷಕರನ್ನು ಕೆಲಸದಿಂದ ವಜಾಗೊಳಿಸಿದೆ,(ಏಜೆನ್ಸೀಸ್).