

Snake Death: ಮನೆಯಲ್ಲಿ ಆಟವಾಡುತ್ತಿದ್ದ ಒಂದು ವರ್ಷ ವಯಸ್ಸಿನ ಮಗವೊಂದು ವಿಷಪೂರಿತ ಹಾವನ್ನೇ ಕಚ್ಚಿ ಕೊಂದ ಘಟನೆ ಬಿಹಾರದ ಬೆಟ್ಟಿಯಾ ಗ್ರಾಮದಲ್ಲಿ ವರದಿಯಾಗಿದೆ.
ಮನೆಯ ಅಂಗಳದಲ್ಲಿ ಕುಳಿತು ಆಟವಾಡುತ್ತಿದ್ದ ಪುಟ್ಟ ಬಾಲಕನ ಕೈಗೆ ನಾಗರಹಾವು ಸುತ್ತಿಕೊಂಡಿದೆ. ಈ ವೇಳೆ ಹಾವಿನ ದೇಹವನ್ನು ಗಟ್ಟಿಯಾಗಿ ಕಚ್ಚಿದ ಮಗು, ಸರ್ಪ ಮೃತಪಟ್ಟ ಕೆಲವೇ ಹೊತ್ತಿಗೆ ಪ್ರಜ್ಞೆ ತಪ್ಪಿ ಬಿದ್ದಿದೆ. ಕೂಡಲೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದ ಪೋಷಕರು, ಮಗನನ್ನು ಕಳೆದುಕೊಂಡೆವು ಎಂದು ವೈದ್ಯರ ಮುಂದೆ ಕಣ್ಣೀರಿಟ್ಟಿದ್ದಾರೆ. ಆದ್ರೆ, ಪವಾಡದಂತೆ ಆತ ಬದುಕುಳಿದಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಪುಟ್ಟ ಬಾಲಕನನ್ನು ಗೋವಿಂದ ಎಂದು ಗುರುತಿಸಲಾಗಿದೆ. ಮಗುವಿನ ಅಜ್ಜಿ ಹೇಳಿಕೆ ಪ್ರಕಾರ, ನಾಗರಹಾವು ಬಾಲಕನ ಅಂಗೈಯನ್ನು ಬಲವಾಗಿ ಸುತ್ತಿಕೊಂಡಿತು. ನೋಡ ನೋಡುತ ಹಾವಿನ ದೇಹಕ್ಕೆ ಬಲವಾಗಿ ಕಚ್ಚಿದ ಗೋವಿಂದ, ತನ್ನ ಹಲ್ಲಿನಿಂದ ಕೆಲವೇ ಸಮಯದಲ್ಲಿ ಸರ್ಪವನ್ನು ಸಾಯಿಸಿದ. ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗನನ್ನು ಕಂಡ ಪೋಷಕರು, ಗಾಬರಿಯಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು ಎಂದಿದ್ದಾರೆ.
ಗೋವಿಂದನ ಸ್ಥಿತಿ ತೀರ ಹದಗೆಡಲು ಪ್ರಾರಂಭಿಸಿದ್ದರಿಂದ ಹೆತ್ತವರು ಮಗ ಮೃತಪಟ್ಟಿದ್ದಾನೆ ಎಂದು ವೈದ್ಯರ ಮುಂದೆ ಕಣ್ಣೀರಿಟ್ಟರು. ಆದರೆ, ಪವಾಡದಂತೆ ಗೋವಿಂದ ಬದುಕುಳಿದಿದ್ದಾನೆ. ಪೋರನ ಆರೋಗ್ಯ ಈಗ ಸುಧಾರಿಸಿಕೊಂಡಿದೆ. ಮಗು ವೀಕ್ಷಣೆಯಲ್ಲಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರನ್ನು ಭಾರೀ ಅಚ್ಚರಿಗೆ ದೂಡಿದೆ,(ಏಜೆನ್ಸೀಸ್).