ಸಂಪಾದಕೀಯ | ಪಟ್ಟಿ ಪರಿಷ್ಕರಣೆ ಅಗತ್ಯ

Untitled design (9)
Published on

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆ ಯಶಸ್ವಿಗೊಂಡ ಬೆನ್ನಲ್ಲೇ, ದೇಶಾದ್ಯಂತ ಎಸ್​ಐಆರ್ ಜಾರಿಗೆ ಚುನಾವಣಾ ಆಯೋಗ ಮುಂದಾಗಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಆಯುಕ್ತರೊಂದಿಗೆ ಬುಧವಾರ ಸಭೆ ನಡೆಸಿದ್ದು, ಅಕ್ಟೋಬರ್​ನಲ್ಲೇ ದೇಶಾದ್ಯಂತ ಎಸ್​ಐಆರ್​ಗೆ ಚಾಲನೆ ಸಿಗುವುದು ಬಹುತೇಕ ಖಚಿತವಾಗಿದೆ. ದೇಶದ ನಾಗರಿಕರಲ್ಲದವರ ಹೆಸರುಗಳು, ಮೃತರ ಹೆಸರುಗಳು, ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರು, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿರುವ ಹೆಸರುಗಳನ್ನು ತೆಗೆದುಹಾಕುವುದು ಅತ್ಯಂತ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮತದಾರ ಪಟ್ಟಿ ಪರಿಷ್ಕರಣೆ ಸ್ವಾಗತಾರ್ಹ ಕ್ರಮವಾಗಿದೆ.

ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕೆಲ ದಶಕಗಳಿಂದ ನಡೆದಿಲ್ಲ. ಹೀಗಾಗಿ, ಗೊಂದಲಗಳು ಮತ್ತು ದೋಷಗಳ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ, ಪಶ್ಚಿಮ ಬಂಗಾಳ ಮತ್ತು ಅಸ್ಸಾನಂಥ ರಾಜ್ಯಗಳಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿದವರು ಕೂಡ ಮತಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂಬ ಗಂಭೀರ ಸಂಗತಿ ಕೆಲ ವರ್ಷಗಳಿಂದ ಚರ್ಚೆಯಲ್ಲಿ ಇದೆ. ಆದರೆ, ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯ ಸಾಧ್ಯವಾಗದೆ ಇರುವುದರಿಂದ, ಗಂಭೀರ ಲೋಪಗಳು ಹಾಗೆಯೇ ಉಳಿದುಕೊಂಡಿವೆ. ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ಕೆಲ ರಾಜ್ಯಗಳು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ.

ಹಾಗಾಗಿ, ಇಡೀ ದೇಶಕ್ಕೆ ಅನ್ವಯವಾಗುವಂತೆ ಎಸ್​ಐಆರ್ ಕೈಗೊಂಡಲ್ಲಿ ಅದು ಮಹತ್ವದ ಹೆಜ್ಜೆ. ಚುನಾವಣೆ ವ್ಯವಸ್ಥೆಯ ಸುಧಾರಣೆ ಎಂಬುದು ಸಾಮೂಹಿಕ ಜವಾಬ್ದಾರಿ. ಇದರಲ್ಲಿ ರಾಜಕೀಯ ಪಕ್ಷಗಳಿಗಂತೂ ಮಹತ್ವದ ಹೊಣೆಗಾರಿಕೆ ಇದೆ. ದೇಶದಲ್ಲಿ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ಸಮಯದಿಂದ ಈವರೆಗೂ ಚುನಾವಣೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಮತ್ತು ಸುಧಾರಣೆಗಳು ಆಗಿವೆ. ಆದ್ದರಿಂದ, ಪಕ್ಷಗಳು ಬರೀ ರಾಜಕೀಯ ಲಾಭ ಅಥವಾ ಮತಬ್ಯಾಂಕಿನ ಚಿಂತೆ ಮಾಡದೆ ವ್ಯವಸ್ಥೆಯ ಶುದ್ಧೀಕರಣಕ್ಕೆ ಆದ್ಯತೆ ನೀಡಬೇಕು. ಎಸ್​ಐಆರ್​ನಿಂದಾಗಿಯೇ ಬಿಹಾರದಲ್ಲಿ 65 ಲಕ್ಷ ಅಕ್ರಮ ಮತದಾರರು ಪತ್ತೆಯಾಗಿದ್ದರು.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಸ್​ಐಆರ್ ನಡೆಸಲು ತೀರ್ವನಿಸಿರುವುದು ಸೂಕ್ತವಾಗಿಯೇ ಇದೆ. ಆದರೆ, ಭೌಗೋಳಿಕವಾಗಿ ವಿಶಾಲವಾಗಿರುವ ಭಾರತ ಬುಡಕಟ್ಟು ರಾಜ್ಯಗಳನ್ನೂ ಒಳಗೊಂಡಿದ್ದು, ಇಲ್ಲಿ ಗುರುತಿಗೆ ಪ್ರತ್ಯೇಕ ದಾಖಲೆಗಳನ್ನು ಬಳಸಲಾಗುತ್ತದೆ. ನಿಜವಾದ ಮತದಾರರಿಗೆ ಅವರ ಮತದಾನ ಹಕ್ಕು ತಪ್ಪಿ ಹೋಗದಂತೆ ಆಯೋಗ ಎಚ್ಚರಿಕೆ ವಹಿಸಬೇಕು ಮತ್ತು ಈ ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net