ಭೂ ವಂದನ -11: ದಿನನಿತ್ಯ ನಮ್ಮ ದೇಹ ಸೇರುವ ಮೈಕ್ರೋಪ್ಲಾಸ್ಟಿಕ್ ಎಂಬ ಪೆಡಂಭೂತ | Bhoo Vandana 11

Untitled design (6)
Published on
Bhoo Vandana 11: ನಮ್ಮ ಮನೆಯೆಂಬ ಪುಟ್ಟ ಜಗತ್ತು ಪ್ಲಾಸ್ಟಿಕ್​ಮಯ. ಹಾಗೆ ಮಾಡಿಕೊಂಡವರೂ ನಾವೇ. ತಲೆ ಬಾಚುವ ಬಾಚಣಿಕೆಯಿಂದ ಹಿಡಿದು ನಾವು ಧರಿಸುವ ಚಪ್ಪಲಿ, ನಾವು ಕೂರುವ ಕುಚಿ೯ಗಳು, ಸ್ನಾನದ ಮನೆಯಲ್ಲಿ ಉಪಯೋಗಿಸುವ ವಸ್ತುಗಳು, ಹೀಗೆ ಪ್ಲಾಸ್ಟಿಕ್ ಆಧಾರಿತ ಬದುಕು ನಮ್ಮದು. ಪ್ಲಾಸ್ಟಿಕ್ ಕೇವಲ ಬಳಸಿ ಬಿಸಾಡುವ ವಸ್ತುವಾಗಿರದೇ ಆಹಾರರೂಪದಲ್ಲಿಯೂ ನಮ್ಮ ದೇಹವನ್ನು ಸೇರಿ ನಮ್ಮ ಆರೋಗ್ಯದ ಮೇಲೆ ಭೀಕರ ಪರಿಣಾಮವನ್ನು ಬೀರುತ್ತಲಿರುವುದರಿಂದ ನಾವೀಗ ಕೊ೦ಚ ಗoಭೀರವಾಗಿ ಯೋಚಿಸಬೇಕಾಗಿದೆ.

ಸುದ್ದಿ ವಾಹಿನಿಗಳಲ್ಲಿ ಮೂಡಿಬರುವ ಪ್ಲಾಸ್ಟಿಕ್ ಅಕ್ಕಿ ಅಥವಾ ದಾಲ್ ತಯಾರಿಸಿ ಅದನ್ನು ನಿಜ ಧಾನ್ಯಗಳ ಜೊತೆ ಮಿಶ್ರಣ ಮಾಡಿ ಮಾರುವ ವಿ‍ಷಯ ಕುರಿತು ನಾವಿಲ್ಲಿ ಪ್ರಸ್ತಾಪಿಸುತ್ತಿಲ್ಲ. ನಾವಿಲ್ಲಿ ಮಾತನಾಡುತ್ತಿರುವುದು ಗೊತ್ತಿದ್ದೂ ನಮ್ಮ ಹೊಟ್ಟೆಗೆ ನಾವು ಪ್ಲಾಸ್ಟಿಕ್ ಸೇರಿಸಿಕೊಳ್ಳುತ್ತಿರುವ ವಿಧಾನಗಳ ಕುರಿತು! ನೆನಪಿಸಿಕೊಳ್ಳಿ ಮಾರುಕಟ್ಟೆಗೆ ಹೋಗಿ ತಾಜಾವಾಗಿ ಕಾಣುವ, ಮಿರ ಮಿರ ಮಿನುಗುವ ಹಣ್ಣು ಮತ್ತು ತರಕಾರಿಗಳನ್ನು ಮನೆಗೆ ತoದು ಅದರಲ್ಲಿ ಅಡುಗೆ ಮಾಡಿ ಸವಿದೆವಲ್ಲ! ಆಹಾರೋದ್ಯಮದಲ್ಲಿ ಉಬಳಸಿರುವ ರಾಸಾಯನಿಕ ಕೀಟನಾಶಕಗಳ ಜೊತೆಗೆ, ತರಕಾರಿ ಹಣ್ಣುಗಳ ಬಣ್ಣ ಕಳೆದುಕೊಳ್ಳದಂತೆ ಮತ್ತು ಹೆಚ್ಚು ಕಾಲ ತಾಜಾ ಕಾಣಲು ಅವುಗಳ ಮೇಲೆ ಹಚ್ಚಿರುವ ಮೇಣದ ಲೇಪನವೂ ಸಾಮಾನ್ಯವಾಗಿ ನಡೆದಿದೆ. ತಂದ ವಸ್ತುಗಳನ್ನು ಬಿಸಿನೀರು ಹಾಗೂ ಉಪ್ಪಿನೊoದಿಗೆ ತೊಳೆಯದಿದ್ದರೆ, ರಾಸಾಯನಿಕದ ಜೊತೆಗೆ ಮೇಣವೂ ಹೊಟ್ಟೆ ಸೇರುವುದು ಖಂಡಿತ. ಇದಲ್ಲದೇ ನಾವು ಸೇವಿಸುವ ಆಹಾರ - (ಅದು ಸಸ್ಯಾಹಾರ ಅಥವಾ ಮಾಂಸಾಹಾರವಿರಬಹುದು)ದಲ್ಲಿ ನಮ್ಮದೇ ಬೇಜವಾಬ್ದಾರಿಯಿ೦ದ ನಾವೆಸದ ವಿವಿಧ ರೂಪದ ಪ್ಲಾಸ್ಟಿಕ್ ನೀರಲ್ಲಿ, ಭೂಮಿಯಲ್ಲಿ ಸೇರಿಹೋಗಿ, ಮೈಕ್ರೋ ರೂಪದಲ್ಲಿ ನಮ್ಮ ದೇಹವನ್ನು ಸೇರುತ್ತಿದೆಯೆಂದು ಅನೇಕ ಸoಶೋಧನೆಗಳು ದೃಢೀಕರಿಸಿವೆ.

ಇನ್ನು ತರಕಾರಿಯನ್ನು ಕತ್ತರಿಸಲು ಮನೆಯಲ್ಲಿದೆ ಪ್ಲಾಸ್ಟಿಕ್​ನ ತರಕಾರಿ ಕತ್ತರಿಸುವ ಮಣೆ. ಚಾಕುವಿನ ಹರಿತ ತಗುಲಿ, ನುಣಪಾಗಿದ್ದ ಮಣೆ ಕ್ರಮೇಣ ಒರಟಾಗುವುದನ್ನು ಗಮನಿಸಿಲ್ಲವೇ? ಮಣೆಯ ಪ್ಲಾಸ್ಟಿಕ್ ಕೊಂಚ ಕೊಂಚವಾಗಿ ನಮ್ಮ ಹೊಟ್ಟೆ ಸೇರಿದ್ದು ನಾವು ಗಮನಿಸುತ್ತಿದ್ದೇವೆಯೇ? ಇನ್ನು ನಾವು ಕುಡಿಯುವ ಬಾಟಲ್ ನೀರಿನಲ್ಲಿ, ಪ್ಯಾಕೇಜ್ ಮಾಡಿದ ಆಹಾರ (ಚಿಪ್ಸ್, ಬಿಸ್ಕೆಟ್, ಜ್ಯೂಸ್) ಸೇವಿಸುವಾಗ ಪ್ಲಾಸ್ಟಿಕ್​ನ ಕಣಗಳು ನಮ್ಮ ಹೊಟ್ಟೆಯನ್ನು ಸೇರುತ್ತವೆ. ಹಾಗೆಯೇ ನಾವು ಪರಿಸರಕ್ಕೆ ಪೂರಕ ಎoದು ಬಳಸುವ ಪೇಪರ್ ಕಪ್ಪುಗಳ ಮೂಲಕವೂ ನಮ್ಮ ದೇಹಕ್ಕೆ ಸೇರುವ ಮೈಕ್ರೋ ಪ್ಲಾಸ್ಟಿಕ್ ಬಗ್ಗೆ ನಮಗೆ ಗಮನವಿದೆಯೇ? ನಿಜ. ಇಂದು ನಮ್ಮ ಸುತ್ತಲಿನ ವ್ಯವಹಾರಿಕ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅನೇಕ ಕಡೆ ಪೇಪರ್​ನಿಂದ ತಯಾರಾದ ಉತ್ಪನ್ನಗಳನ್ನು ಬಳಸುವುದು ಸ್ವಾಭಾವಿಕವಾಗಿದೆ. ಅದರಲ್ಲೂ ಪೇಪರ್ ಕಪ್​ಗಳ ಬಳಕೆ ಮದುವೆ, ಸಮಾರಂಭ, ಹೋಟೆಲ್, ಕ್ಯಾಂಟೀನ್, ಕಚೇರಿಗಳಲ್ಲಿರಲಿ ಮನೆಗಳಲ್ಲೂ ಅತಿಥಿಗಳ ಸoಖ್ಯೆ ಹೆಚ್ಚಾದರೆ ಚಹಾ, ಕಾಫಿ, ಜ್ಯೂಸ್, ನೀರು ಇತ್ಯಾದಿಗಳನ್ನು ವಿತರಿಸಲು ಪೇಪರ್ ಕಪ್‌ಗಳನ್ನು ಬಳಸುವುದು ಸಾಮಾನ್ಯ.

ಕಾಗದ ಬಳಸಿ ಮಾಡುವ ಕಪ್​ಗಳ ಒಳಭಾಗದಲ್ಲಿ ದ್ರವಸೋರದಂತೆ ತಡೆಯಲು ತೆಳುವಾದ ಪ್ಲಾಸ್ಟಿಕ್ ಅಥವಾ ಮೇಣವನ್ನು ಲೇಪಿಸಿರುತ್ತಾರೆ. ಬಿಸಿ ಪಾನೀಯಗಳನ್ನು ಹಾಕಿದಾಗ ಈ ಲೇಪನ ಕರಗಿ ಪಾನೀಯದಲ್ಲಿ ಬೆರೆತು ನಂತರ ನಮ್ಮ ದೇಹವನ್ನೂ ಸೇರುತ್ತಿದೆ. ಕಾಯ೯ಕ್ರಮಗಳಲ್ಲಿ, ರಸ್ತೆ ಬದಿಯ ಚಹಾ ಅಂಗಡಿಗಳಲ್ಲಿ ರಾಶಿ ರಾಶಿಯಾಗಿ ಬೀಳುವ ಈ ಪೇಪರ್ ಕಪ್​ಗಳ ಮರು ಬಳಕೆ ನಿಜಕ್ಕೂ ಸಾಧ್ಯವೇ? ಆಗುತ್ತಿದೆಯೇ? ತಿಳಿಯದು. ಪೇಪರ್ ಕಪ್​ಗಳು, ಪ್ಲಾಸ್ಟಿಕ್ ಲೇಪನದ ಕಾರಣ ಪರಿಸರಕ್ಕೆ ಮಾರಕವಲ್ಲದಿದ್ದರೂ ಸ್ನೇಹಿಯೂ ಅಲ್ಲ. ಸ್ಟೀಲ್ ಅಥವಾ ಇನ್ನಾವುದೇ ಲೋಹದಿ೦ದ ತಯಾರಾದ ಪಾತ್ರೆಗಳ ಬಳಕೆ ಸಮಸ್ಯೆಗೆ ಉತ್ತರ. ಆದರೆ, ಉಪಯೋಗಿಸಿದ ನಂತರ ಅವುಗಳ ಸ್ವಚ್ಛಗೊಳಿಸುವ ಸೂಕ್ತ ವ್ಯವಸ್ಥೆಗೆ ನಾವು ಗಮನ ನೀಡಿಲ್ಲ. ರಸ್ತೆ ಬದಿಯಲ್ಲಿನ ಆಹಾರ ಮಾರಾಟ ಪ್ರಚಲಿತವೇ ಹೊರತು, ಸ್ವಚ್ಛತೆಗೆಲ್ಲಿದೆ ಪ್ರಾಮುಖ್ಯತೆ, ಅಲ್ಲವೇ? ಅಂದ ಹಾಗೆ ಪೇಪರ್ ಕಪ್​ಗಳ ಸಮಸ್ಯೆ ಕೇವಲ ರಸ್ತೆ ಬದಿಯ ಚಹಾ ಅಂಗಡಿಯದ್ದಷ್ಟೇ ಅಲ್ಲ, ಪ್ರತಿಷ್ಠಿತ ಕಂಪನಿಗಳ 'ಟೇಕ್ ಅವೇ' ಕಾಫೀ/ ಚಹಾ ಕುಡಿದರೂ ಇದೇ ಸಮಸ್ಯೆ, ಅವುಗಳು ಬಳಸುವ ಕಪ್​ಗಳ ಒಳಪದರವೂ ಪಾಲಿಥೆಲೆನ್ ಲೇಪನಗೊಂಡಿರುತ್ತವೆ.

ಪರಿಸರ ಸ್ನೇಹಿ ಪುನರ್ ಬಳಸಬಹುದು ಎನ್ನುವ ಸೂಚನೆಯ ಈ ಕಪ್​ಗಳು ಹೊತ್ತರೂ ಅವು ತ್ಯಾಜ್ಯವಾಗಿ ಭೂಮಿಯನ್ನು ಸೇರುವುದೇ ಹೆಚ್ಚು! ನಮ್ಮ ದೇಹವನ್ನು ಸೇರುವ ನಾವು ಕಾಣಬಹುದಾದ ಮತ್ತು ನಮ್ಮ ಅನುಭವಕ್ಕೆ ಬರುವ ಮೈಕ್ರೋ ಪ್ಲಾಸ್ಟಿಕ್​ನ ಬಗೆಗಳು ಅನೇಕ. ಉದಾಹರಣೆಗೆ ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳ ಟೈರ್​ಗಳ ಚಲನೆಯ ಘಷ೯ಣೆಯಿಂದ ಹೊರಬರುವ ನ್ಯಾನೋ ಪ್ಲಾಸ್ಟಿಕ್ ಕಣಗಳ, ನಾವು ಧರಿಸುವ ಸಿoಥೆಟಿಕ್ ಬಟ್ಟೆ, ಕೂರುವ ಸೋಫಾ, ನೆಲಕ್ಕೆ ಹಾಸುವ ಕಾಪೆ೯ಟ್, ಇವುಗಳಿಂದ ಹೊರಹೊಮ್ಮವು ಸೂಕ್ಷ್ಮಾತಿಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ನಮ್ಮ ದೇಹವನ್ನು ಸೇರುತ್ತವೆ. ಇದರೊಂದಿಗೆ ನಾವು ಬಳಸುವ ಶ್ಯಾಂಪೂ, ಸೋಪು, ಟೂಥ್ ಪೇಸ್ಟ್​ನಲ್ಲಿ ಪ್ಲಾಸ್ಟಿಕ್ ದ್ರವರೂಪದಲ್ಲಿದ್ದು ನಮ್ಮ ಕೂದಲನ್ನು ದೇಹದ ಚಮ೯ವನ್ನು ನುಣಪು ಮಾಡುವ ಜೊತೆಗೆ ನಮ್ಮ ದೇಹದೊಳಗೂ ನಮಗೆ ಅರಿವಿಲ್ಲದoತೆ ನೀರು, ಆಹಾರ, ಮತ್ತು ಗಾಳಿಯ ಮೂಲಕ ಸೇರಿಹೋಗುತ್ತಿವೆ.

ಬೇಡದ ಯಾವುದೇ ವಸ್ತುವನ್ನು ತ್ಯಾಜ್ಯ ರೂಪದಲ್ಲಿ ಹೊರಕ್ಕೆ ಹಾಕುವ ಶಕ್ತಿ ದೇಹಕ್ಕಿರುವುದರಿಂದ ಪ್ಲಾಸ್ಟಿಕ್ ಅಂಶ ಕೂಡ ಹೊರಕ್ಕೆ ನಾವು ದೂಡಬಹುದು ಎನ್ನುವುದು ನಮ್ಮ ತಪ್ಪು ಕಲ್ಪನೆಯೆಂದು ಅಧ್ಯಯನಗಳು ತಿಳಿಸಿವೆ. ಪ್ಲಾಸ್ಟಿಕ್ಕಿನ ನ್ಯಾನೋ ಕಣಗಳು ನಮ್ಮ ಹಾಮೋ೯ನುಗಳ ಮೇಲೆ ತೀವ್ರ ಪರಿಣಾಮ ಬೀರಬಹುದೆಂದು ವಿಜ್ಞಾನಿಗಳು ತಿಳಿಸುತ್ತಿದ್ದಾರೆ. ಹಾಮೋ೯ನುಗಳ ಏರುಪೇರಿನಿಂದಾಗಿ, ಡಯಾಬಿಟೀಸ್ , ಸ್ಥೂಲತೆ, ಹೃದಯ ಸoಬಂಧಿ ಖಾಯಿಲೆಗಳು, ಕ್ಯಾನ್ಸರ್, ಹುಟ್ಟಿಗೆ ಸoಬಂಧಿಸಿದ ಸಮಸ್ಯೆಗಳು, ಮಿದುಳಿನ ಖಾಯಿಲೆ, ಗoಡು-ಹೆಣ್ಣು ಇಬ್ಬರಲ್ಲೂ ಸಂತಾನಕ್ಕೆ ಕುರಿತಾದ ಸಮಸ್ಯೆಗಳು ಸಾಮಾನ್ಯವೆನ್ನಲಾಗುತ್ತಿದೆ. ಪ್ಲಾಸ್ಟಿಕ್ ಕಣಗಳು ಸಿoಥಟಿಕ್ ಸ್ವಭಾವದ್ದಾಗಿದ್ದು ನಮ್ಮ ದೇಹದ ಕಣಗಳ ಜೊತೆಗೆ ಬೆರೆಯುವುದಿಲ್ಲ. ಹೀಗಾಗಿಯೇ ಪ್ಲಾಸ್ಟಿಕ್ ಕಣಗಳು ದೇಹದ ಯಾವುದೇ ಭಾಗಕ್ಕೆ ತಲುಪಿದರೂ ಅಲ್ಲಿಯೇ ಉಳಿಯುತ್ತವೆ. ಇದನ್ನು ನಾವು ಬಯೋಅಕ್ಯುಮಲೇಷನ್ ಎಂದು ಕರೆಯುತ್ತೇವೆ. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಆಗುವ ಕಾರಣ ಹೊಟ್ಟೆ ನೋವು, ಅಜೀರ್ಣ, ಉಬ್ಬರ ಇತ್ಯಾದಿ ತೊಂದರೆಗಳು ದೇಹದಲ್ಲಿ ಕಾಣುವುದು ಸಾಮಾನ್ಯ. ಅದಕ್ಕಾಗಿ ಪದಾಥ೯ಗಳನ್ನು ತರುವ ಮತ್ತು ಸೇವಿಸುವ ಮುನ್ನ ಎಚ್ಚರದಿಂದಿರೋಣ ಎಂದಷ್ಟೇ ಹೇಳಬಹುದು.

ಲೇಖಕರ ಪರಿಚಯ

ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್​ನ ಸಂಸ್ಥಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net