

Balendra Shah: ಪ್ರಸ್ತುತ, ನೇಪಾಳದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ದೊಡ್ಡ ಹಿಂಸಾಚಾರಕ್ಕೆ ತಿರುಗಿ, 19ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿರುವುದು ಸದ್ಯ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಪ್ರತಿಭಟನಾಕಾರರು ನೇಪಾಳ ಪ್ರಧಾನಿ ಮತ್ತು ರಾಷ್ಟ್ರಪತಿ ಮನೆಗೆ ಬೆಂಕಿಯಿಟ್ಟರೆ, ಹಣಕಾಸು ಸಚಿವನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಥಳಿಸಿರುವುದು ಇಡೀ ಜಗತ್ತನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿದೆ ಎಂಬುದರಲ್ಲಿ ಅನುಮಾನವೇ ಬೇಡ. ಈಗಾಗಲೇ ಪ್ರಧಾನಿ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಲಾಯನಕ್ಕೆ ಮುಂದಾಗಿದ್ದಾರೆ ಎಂದು ಒಂದಷ್ಟು ವರದಿಗಳು ಸೂಚಿಸಿವೆ. ಈ ಮಧ್ಯೆ, ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶರ್ಮ ಕೇಳಿಬಂದಿದ್ದು, ಯುವಜನತೆ ಕೂಡ ಇವರಿಗೇ ಬೆಂಬಲ ನೀಡುತ್ತಿರುವುದಾಗಿ ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ.
ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಈಗ ಇನ್ನಷ್ಟು ತೀವ್ರಗೊಂಡಿದೆ. ಯುವಕರು ಆರಂಭಿಸಿರುವ ಪ್ರತಿಭಟನೆಗಳು ದೇಶದ ರಾಜಕೀಯವನ್ನೇ ಅಲುಗಾಡಿಸಿದೆ. ಮಾಜಿ ಪಿಎಂ ಓಲಿ ಸರ್ಕಾರದ ನಿರ್ಧಾರದ ವಿರುದ್ಧ ಜೆನ್ಝಿ ಯುವಕರು ಬೀದಿಗಿಳಿದು, ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಈ ತೀವ್ರ ಪ್ರತಿಭಟನೆ ಮತ್ತು ಆಂದೋಲನಗಳಿಂದ ಸದ್ಯ ನೇಪಾಳ ಸಂಪೂರ್ಣವಾಗಿ ತತ್ತರಿಸಿದೆ. ಪ್ರತಿಭಟನಾಕಾರರ ಕೋಪದ ಜ್ವಾಲೆ ಅಲ್ಲಿನ ಸರ್ಕಾರವನ್ನು ಭಾಗಶಃ ಕೆಡವಿದ್ದು, ಹೊಸ ಸರ್ಕಾರಕ್ಕೆ ಎದುರುನೋಡುತ್ತಿದೆ. ಕೆ.ಪಿ. ಶರ್ಮಾ ಓಲಿ, ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಅವರ ಸ್ಥಾನಕ್ಕೆ ಯಾರು ಬರಬಹುದು ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಈ ಸಂದರ್ಭದಲ್ಲಿ, ನೇಪಾಳದ ಮುಂದಿನ ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಬಾಲೇಂದ್ರ ಶಾ ಹೆಸರು ವ್ಯಾಪಕವಾಗಿ ಕೇಳಿಬಂದಿದ್ದು, ಅವರ ಹೆಸರೇ ಪ್ರಮುಖವಾಗಿರುವುದು ಸದ್ಯ ಹಲವರ ಕುತೂಹಲವನ್ನು ಕೆರಳಿಸಿದೆ. ಬಾಲೆನ್ ಎಂದು ಕರೆಯಲ್ಪಡುವ ಈ ವ್ಯಕ್ತಿಗೆ, ಜೆನ್ಝಿ ಸಮೂಹದಿಂದ ಭಾರೀ ಬೆಂಬಲವಿದೆ ಎಂದು ಹೇಳಲಾಗಿದೆ. ನೇಪಾಳದ ಹೊಸ ಪ್ರಧಾನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಇದರೊಟ್ಟಿಗೆ ಒಂದಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಅಷ್ಟಕ್ಕೂ ಯಾರು ಈ ಬಾಲೇಂದ್ರ ಶಾ? ಇವರ ಬಗ್ಗೆ ಅಂತ ವಿಶೇಷವೇನು? ಇವರನ್ನೇ ಏಕೆ ಯುವಜನತೆ ಬೆಂಬಲಿಸುತ್ತಿರುವುದು ಎಂಬ ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.
ಬಾಲೆನ್ ಶಾ, ಪ್ರಸ್ತುತ ಕಠ್ಮಂಡುವಿನ ಮೇಯರ್. 1990ರಲ್ಲಿ ಕಠ್ಮಂಡುವಿನಲ್ಲಿ ಜನಿಸಿದ ಈ ವ್ಯಕ್ತಿ, ಒಂದು ಕಾಲದಲ್ಲಿ ರ‍್ಯಾಪರ್ ಆಗಿದ್ದರು. ಹಾಡುಗಳನ್ನು ಬರೆಯುತ್ತಿದ್ದ ಇವರು, ತಮ್ಮ ಸಾಂಗ್ಗಳ ಮೂಲಕವೇ ಯುವಕರಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇದರೊಂದಿಗೆ ರಾಜಕೀಯ ಭ್ರಷ್ಟಾಚಾರ ಮತ್ತು ಸಾಮಾಜಿಕ ಅಸಮಾನತೆಯನ್ನು ಟೀಕಿಸಿದರು. ಬಲಿದಾನ್ ಹಾಡು ಯೂಟ್ಯೂಬ್‌ನಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಬಾಲೆನ್, 2022ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಠ್ಮಂಡುವಿನ ಮೇಯರ್ ಆಗಿ ಆಯ್ಕೆಯಾದರು. ಚುನಾವಣೆಯಲ್ಲಿ 61,000 ಮತಗಳಿಂದ ಜಯ ಸಾಧಿಸಿದ್ದು ಮತ್ತೊಂದು ಗಮನಾರ್ಹ ವಿಷಯ.
ಬಾಲೆನ್‌ಗೆ ಈಗ 35 ವರ್ಷ. ರ‍್ಯಾಪರ್ ಆಗಿದ್ದವರು ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಕಠ್ಮಂಡುವಿನ 15ನೇ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಪಕ್ಷದ ಬೆಂಬಲವಿಲ್ಲದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೇಯರ್ ಸ್ಥಾನವನ್ನು ಗೆದ್ದಿರುವ ಇವರಿಗೆ ಯುವಜನತೆಯ ಬೆಂಬಲ ಹೆಚ್ಚಾಗಿಯೇ ಇದೆ. ಅಸಲಿಗೆ ಬಾಲೆನ್‌ಗೆ ಭಾರತದೊಂದಿಗೆ ನಂಟಿದೆ. ತಮ್ಮ ಶಿಕ್ಷಣವನ್ನು ಅವರು ಕರ್ನಾಟಕದಲ್ಲಿ ಪಡೆದಿದ್ದಾರೆ. ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ನೇಪಾಳಿ ಹಿಪ್-ಹಾಪ್ ರಂಗದಲ್ಲಿ ಸಕ್ರಿಯರಾಗಿದ್ದರು. ಭ್ರಷ್ಟಾಚಾರ ಮತ್ತು ಅಸಮಾನತೆಯನ್ನು ಎತ್ತಿ ಹಿಡಿಯಲು ತಮ್ಮ ಸಂಗೀತವನ್ನು ಬಳಿಸಿಕೊಂಡಿರುವುದು ವಿಶೇಷ.
2023ರ ಜೂನ್ನಲ್ಲಿ, ಬಾಲಿವುಡ್ನ 'ಆದಿಪುರುಷ' ಚಿತ್ರದ ಸಂಭಾಷಣೆಯಿಂದಾಗಿ ಕಠ್ಮಂಡುವಿನಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ನಿಷೇಧಿಸುವ ಮೂಲಕ ಅವರು ರಾಷ್ಟ್ರೀಯ ಗಮನ ಸೆಳೆದರು. ನೇಪಾಳದ ಹೊಸ ಪ್ರಧಾನಿ ಬಾಲೇಂದ್ರ ಶಾ ಎಂಬ ಪ್ರಚಾರಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿವೆ. ಪಕ್ಷಗಳಿಗೆ ಕೆಲಸ ಮಾಡುವ ನಾಯಕನಲ್ಲ, ಜನರಿಗಾಗಿ ಕೆಲಸ ಮಾಡುವ ಲೀಡರ್ ಇವರು ಎಂಬ ಘೋಷಣೆಗಳು ಬಾಲೆನ್ ಅವರ ಹೆಸರಿನಲ್ಲಿ ಹರಿದಾಡುತ್ತಿವೆ. ಅಸಲಿಗೆ ಯಾರು ನೂತನ ಪ್ರಧಾನಿಯಾಗಲಿದ್ದಾರೆ? ಬಾಲೆನ್‌ಗೆ ಈ ಅವಕಾಶ ಸಿಗಲಿದ್ಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).