

IND vs UAE: ನಿನ್ನೆಯಿಂದ (ಸೆ.09) ದುಬೈನಲ್ಲಿ ಆರಂಭಗೊಂಡಿರುವ ಏಷ್ಯಾಕಪ್ ಟಿ20 ಟೂರ್ನಿಯ ಎರಡನೇ ದಿನದಂದು ಭಾರತ ಮತ್ತು ಯುಎಇ ಮುಖಾಮುಖಿಯಾಗಲಿವೆ. ಇದು ಟೀಮ್ ಇಂಡಿಯಾಗೆ ಮೊದಲನೇ ಪಂದ್ಯ ಎಂಬುದು ಗಮನಾರ್ಹ. ರಾತ್ರಿ 8 ಗಂಟೆಗೆ ಶುರುವಾಗಲಿರುವ ಈ ಕೌತುಕದ ಪಂದ್ಯಕ್ಕೆ ಸದ್ಯ ಕ್ರಿಕೆಟ್ ಪ್ರೇಮಿಗಳ ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲಿ ಆತಿಥೇಯ ಯುಎಇ ವಿರುದ್ಧ ಈ ಪಂದ್ಯ ನಡೆಯಲಿದ್ದು, ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನೇರ ಪ್ರಸಾರವಾಗಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ, ಏಷ್ಯಾಕಪ್ ಟಿ20 ಇತಿಹಾಸದಲ್ಲಿ ಕೇವಲ ಒಂದು ಬಾರಿ ಮಾತ್ರ ಯುಎಇ ಜತೆ ಮುಖಾಮುಖಿಯಾಗಿದೆ. 2016ರ ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು ಢಾಕಾದಲ್ಲಿ ಪ್ರಥಮ ಬಾರಿಗೆ ಸೆಣಸಿತ್ತು. ಆ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಅಂತರದಲ್ಲಿ ಪಂದ್ಯವನ್ನು ಗೆದ್ದು ಬೀಗಿತ್ತು.
ಈ ಪಂದ್ಯದಲ್ಲಿ ಯುಎಇ ಮೊದಲು ಬ್ಯಾಟಿಂಗ್ ಮಾಡಿತು. 20 ಓವರ್ ಅಂತ್ಯಕ್ಕೆ 9 ವಿಕೆಟ್‌ಗಳ ಪಡೆದ ಟೀಮ್ ಇಂಡಿಯಾ ಬೌಲರ್ಗಳು, ಯುಎಇ ತಂಡವನ್ನು ಕೇವಲ 81 ರನ್‌ಗೆ ಕಟ್ಟುಹಾಕಿತು. ಶೈಮನ್ ಅನ್ವರ್ (48 ಎಸೆತದಲ್ಲಿ 3 ಬೌಂಡ, 1 ಸಿಕ್ಸ್) ಬಾರಿಸುವ ಮೂಲಕ ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ರೋಹನ್ ಮುಸ್ತಫಾ (11) ಹೊರತುಪಡಿಸಿ, ಉಳಿದವರೆಲ್ಲರೂ ಒಂದೇ ಅಂಕಿಗೆ ಪೆವಿಲಿಯನ್ ಹಾದಿ ಹಿಡಿದಿದ್ದರು.
ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ಹರ್ಭಜನ್ ಸಿಂಗ್, ಹಾರ್ದಿಕ್ ಪಾಂಡ್ಯ, ಪವನ್ ನೇಗಿ ಮತ್ತು ಯುವರಾಜ್ ಸಿಂಗ್ ತಲಾ ಒಂದು ವಿಕೆಟ್ ಕಬಳಿಸಿದ್ದರು.
82 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತ, ಕೇವಲ 10.1 ಓವರ್‌ನಲ್ಲೇ ಪಂದ್ಯವನ್ನು ಗೆದ್ದು ಬೀಗಿತು. ಒಂದು ವಿಕೆಟ್ ನಷ್ಟಕ್ಕೆ ಈ ಗುರಿಯನ್ನು ಬಹಳ ಸರಳವಾಗಿ ತಲುಪಿತು. ತಂಡದ ಪರ ರೋಹಿತ್ ಶರ್ಮ (28 ಎಸೆತದಲ್ಲಿ 39 ರನ್, 7 ಬೌಂಡರಿ, 1 ಸಿಕ್ಸರ್) ಬಾರಿಸುವ ಮೂಲಕ ಅಭಿಮಾನಿಗಳ ಗಮನವನ್ನು ಸೆಳೆದರು. ಇನ್ನು ಹಿಟ್ಮ್ಯಾನ್ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್ನಲ್ಲಿದ್ದ ಆರಂಭಿಕ ಬ್ಯಾಟರ್ ಶಿಖರ್ ಧವನ್, ಕೇವಲ ಎರಡು ರನ್ ಗಳಿಸಿದರೆ, ಯುವರಾಜ್ (25 ಅಜೇಯ) ಗಟ್ಟಿಯಾಗಿ ನಿಂತರು. ಯುಎಇ ವಿರುದ್ಧದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರತ ಮತ್ತು ಯುಎಇ ಇದುವರೆಗೆ ಐದು ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ. ಇಂದಿನ ಪಂದ್ಯ ಎರಡನೆಯದು. ಈ ಮಧ್ಯೆ ಯುಎಇ ತನ್ನ ಕೊನೆಯ 5 ಟಿ20 ಪಂದ್ಯಗಳನ್ನು ಕೈಚೆಲ್ಲಿದೆ. ಇದೇ ಟೀಮ್ ಇಂಡಿಯಾ ವಿಷಯಕ್ಜೆ ಬಂದರೆ, ಕಳೆದ ಐದು ಪಂದ್ಯಗಳಲ್ಲಿ ಭಾರತ ನಾಲ್ಕರಲ್ಲಿ ಗೆದ್ದು, ಒಂದರಲ್ಲಿ ಮಾತ್ರ ಸೋಲನ್ನು ಅನುಭವಿಸಿದೆ,(ಏಜೆನ್ಸೀಸ್).