ಪೊಲೀಸ್ ಪೇದೆಯನ್ನು ಕೊಂದ ಸಾರಾಯಿ ಮಾಫಿಯಾ ನಾಯಕ, ಮೋತಿ ಸಿಂಗ್ ಎನ್​ಕೌಂಟರ್

crime
Published on

ಲಖನೌ: ಕಾಸ್ಗಂಜ್ ಹತ್ಯಾಕಾಂಡದ ಮುಖ್ಯ ಆರೋಪಿ ಮತ್ತು ಸಾರಾಯಿ ಮಾಫಿಯಾ ನಾಯಕ ಮೋತಿ ಸಿಂಗ್​ನನ್ನು ಉತ್ತರಪ್ರದೇಶ ಪೊಲೀಸರು ಭಾನುವಾರ ಗುಂಡಿಕ್ಕಿ ಕೊಂದಿದ್ದಾರೆ. ಮೃತ ಆರೋಪಿಯು ಹಿಸ್ಟರಿಶೀಟರ್ ಆಗಿದ್ದು, 11 ಕ್ರಿಮಿನಲ್ ಪ್ರಕರಣಗಳು ಅವನ ವಿರುದ್ಧ ದಾಖಲಾಗಿದ್ದವು ಎನ್ನಲಾಗಿದೆ.

ಫೆಬ್ರವರಿ 9 ರಂದು, ಮೋತಿ ಮತ್ತು ಅವನ ಸಹಚರರು ಕಾಸ್ಗಂಜಿನ ನಾಗ್ಲಾ ಧೀಮರ್ ಹಳ್ಳಿಗೆ ವಾರಂಟ್ ಹಿಡಿದು ರೇಡ್ ಮಾಡಲು ಹೋದ ಪೊಲೀಸರ ಮೇಲೆ ಗುಂಡಿನ ಚಕಮಕಿ ನಡೆಸಿದ್ದರು. ಸಿದ್ಧಪುರ ಠಾಣೆಯ ಪೊಲೀಸ್​ ಪೇದೆ ದೇವೇಂದ್ರ ಮೃತಪಟ್ಟಿದ್ದಲ್ಲದೆ, ಸಬ್ಇನ್ಸ್​ಪೆಕ್ಟರ್​ ಗಾಯಗೊಂಡಿದ್ದರು. ಮೋತಿ ಸಿಂಗ್​ನ ಸೋದರ ಎಲ್ಕಾರ್​ ಕೂಡ ಸಾವಪ್ಪಿದ್ದ. ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಮೋತಿ ಸಿಂಗ್​ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಕೂಡ ಘೋಷಿಸಲಾಗಿತ್ತು.

ಕಾಳಿ ನದಿ ತೀರದಲ್ಲಿರುವ ಕಾಡಿನಲ್ಲಿ ಮೋತಿ ಸಿಂಗ್ ಬಚ್ಚಿಟ್ಟುಕೊಂಡಿರುವುದಾಗಿ ಸುಳಿವು ಸಿಕ್ಕ ಪೊಲೀಸರು, ಅವನನ್ನು ಬಂಧಿಸಲು ತೆರಳಿದ್ದರು. ಮತ್ತೆ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಮೋತಿ ಸಿಂಗ್​ಗೆ ಪೊಲೀಸರ ಗುಂಡು ತಾಗಿತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕುಳಿಯಲಿಲ್ಲ ಎಂದು ಕಾಸ್ಗಂಜ್ ಎಸ್ಪಿ ಮನೋಜ್ ಸೋನ್ಕರ್ ಹೇಳಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net