ಹೊಸ ವರ್ಷಕ್ಕೆ ರೂ. 532 ಕೋಟಿಯ ಕಿಕ್; ಮದಿರೆಯ ಮತ್ತೇರಿಸಿಕೊಂಡು ಸಂಭ್ರಮ | 3 ದಿನದಲ್ಲಿ ದಾಖಲೆಯ ಮದ್ಯ ಮದರಾಟ

87542
Published on

ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷಕ್ಕೆ ಮದ್ಯದ ಹೊಳೆ ಜೋರಾಗಿಯೇ ಹರಿದಿದೆ. ಹಿಂದಿನ ಎರಡು ವರ್ಷದ ಮಾರಾಟವನ್ನು ಹಿಂದಿಕ್ಕಿದೆ. ಜತೆಗೆ, ‘ಬಿಯರ್’ ಪ್ರಿಯರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ.

ರಾಜ್ಯದಲ್ಲಿ 3,921 ವೈನ್​ಶಾಪ್ (ಸಿಎಲ್2), 3622 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9), 1,729 ಹೋಟೆಲ್ ಮತ್ತು ವಸತಿಗೃಹ (ಸಿಎಲ್7) ಹಾಗೂ 265 ಕ್ಲಬ್ ಸೇರಿ ಒಟ್ಟು 12,113 ಮದ್ಯದಂಗಡಿಗಳಿವೆ. ಮದ್ಯ ಮಾರಾಟ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ತುಮಕೂರು ಮತ್ತು ಬೆಳಗಾವಿ ಪ್ರಮುಖವಾಗಿವೆ. ಇತರೆಡೆಯೂ ಏರಿಕೆ ದಾಖಲಾಗಿದೆ.

2020-21ರ ಡಿ.23ರಿಂದ ಡಿ.31ರವರೆಗೆ ಒಟ್ಟು 17.48 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್), 10.62 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2021-22ರ ಡಿ.23ರಿಂದ ಡಿ.31ರವರೆಗೆ 19.46 ಲಕ್ಷ ಬಾಕ್ಸ್ ಐಎಂಎಲ್, 11.24 ಲಕ್ಷ ಬಾಕ್ಸ್ ಬಿಯರ್, 2022-23ರ ಡಿ.23ರಿಂದ ಡಿ.31ರವರೆಗೆ 20.66 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 15.04 ಲಕ್ಷ ಬಾಕ್ಸ್ ಬಿಯರ್ ಸೇಲಾಗಿದೆ. ಇದರಿಂದ ಒಟ್ಟಾರೆ 1,262 ಕೋಟಿ ರೂ. ಮದ್ಯ ವಹಿವಾಟು ನಡೆದಿದ್ದು, ಸರ್ಕಾರಕ್ಕೆ 757 ಕೋಟಿ ರೂ. ಆದಾಯ ಸಂದಾಯವಾಗಿದೆ.

29,000 ಕೋಟಿ ರೂ. ಗುರಿ: ಇಲಾಖೆಗೆ 2022-23ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ. ರಾಜಸ್ವ ಗುರಿ ನೀಡಲಾಗಿತ್ತು. ಡಿ.29ರವರೆಗೆ ವೇಳೆಗೆ ಮದ್ಯ ಮಾರಾಟದಿಂದ 21,981 ಕೋಟಿ ರೂ. ಆದಾಯ ಬಂದಿದೆ. ಈ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ 3 ತಿಂಗಳಿದ್ದು, ಗುರಿ ತಲುಪುವ ನಿರೀಕ್ಷೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನ ಇದೇ ಅವಧಿಯಲ್ಲಿನ ಮದ್ಯ ಮಾರಾಟದಲ್ಲಿ ಶೇ.14 ಹೆಚ್ಚಳವಾಗಿದೆ.

ದಾಖಲೆ ಧೂಳಿಪಟ

2022-23ರ ಡಿ.29ರಿಂದ ಡಿ.31ರವರೆಗೆ 8.24 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 6.62 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಇದೂ ಸಹ ಹಿಂದಿನ ಎರಡು ವರ್ಷದ ದಾಖಲೆಗಳನ್ನು ಮುರಿದಿದೆ. ಡಿ.31ರಂದು 200 ಕೋಟಿ ರೂ. ಮೌಲ್ಯದ ಐಎಂಎಲ್ ಮತ್ತು ಬಿಯರ್ ಮಾರಾಟವಾಗಿದೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net