

ಮಾಸ್ಕೋ: ನೀರು ಮತ್ತು ಆಹಾರ ನೀಡದೆ ಇಕ್ಕಟ್ಟಾದ ಸಣ್ಣ ಮರದ ಬಾಕ್ಸ್ನಲ್ಲಿ ಇಟ್ಟು ಬಸ್ ಮೂಲಕ ಕದ್ದು ಸಾಗಿಸುತ್ತಿದ್ದ ಸಿಂಹದ ಮರಿಯನ್ನು ರಕ್ಷಿಸಲಾಗಿದ್ದು, ಆನಂತರ ಮರಿಯಲ್ಲಿ ಕಾಣಿಸಿಕೊಂಡ ಅನಾರೋಗ್ಯದಿಂದಾಗಿ ಕಣ್ಣುಗಳನ್ನೇ ಕಳೆದುಕೊಂಡಿರುವ ಸ್ಥಿತಿ ಇದೀಗ ಬಂದೋದಗಿದೆ.
ಅಮಾನವೀಯ ಘಟನೆ ರಷ್ಯಾದಲ್ಲಿ ವರದಿಯಾಗಿದೆ. ಗ್ರೊಮ್ ಹೆಸರಿನ ಸಿಂಹದ ಮರಿಯನ್ನು ತುಂಬಾ ಚಿಕ್ಕದಾದ ಮರದ ಬಾಕ್ಸ್ನಲ್ಲಿ ಇಟ್ಟು ಅಂತಾರಾಜ್ಯ ಬಸ್ನ ಲಗೇಜ್ ಕಂಪಾರ್ಟ್ಮೆಂಟ್ನಲ್ಲಿ ಕಳ್ಳಸಾಗಾಣೆ ಮಾಡಲಾಗುತ್ತಿತ್ತು. ಮಖಚಕಲಾ ಹಾಗೂ ಮಾಸ್ಕೋ ನಡುವಿನ ಮಾರ್ಗದಲ್ಲಿ ಸುಮಾರು 1,200 ಮೈಲಿಯವರೆಗೂ ಪ್ರಯಾಣ ಮಾಡಿತ್ತು.
ಕಳೆದ ಬೇಸಿಗೆ ಸಮಯದಲ್ಲಿ ಸಿಂಹದ ಮರಿಯನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. ಕೆಲವೇ ತಿಂಗಳು ವಯಸ್ಸಾಗಿದ್ದ ಮರಿಗೆ ಆಹಾರ ಮತ್ತು ನೀರು ನೀಡದೆ ಹಿಂಸಿಸಲಾಗಿತ್ತು. ತಾಯಿಯ ಎದೆ ಹಾಲು ಕುಡಿಯುವ ಮುನ್ನವೇ ಮರಿಯನ್ನು ಬೇರ್ಪಡಿಸಲಾಗಿದೆ ಎಂದು ನಂಬಲಾಗಿದೆ.
ಗ್ರೊಮ್ ಹೆಸರಿನ ಅರ್ಥ ಸಿಡಿಲು. ರಕ್ಷಿಸಿದ ಬಳಿಕ ಸಿಂಹದ ಮರಿಯನ್ನು ವೊಲ್ಗೊಗ್ರ್ಯಾಡ್ನಲ್ಲಿರುವ ಸರ್ಕಸ್ ಕಂಪನಿಯೊಂದಕ್ಕೆ ಹಸ್ತಾಂತರಿಸಲಾಯಿತು. ಈ ವೇಳೆ ಮರಿಯನ್ನು ಪರೀಕ್ಷಿಸಿದ ಪಶುವೈದ್ಯರು ಅದರ ಕಣ್ಣಲ್ಲಿ ಪೊರೆ ಬೆಳೆದಿರುವುದನ್ನು ಗಮನಿಸಿದರು.
ಸೆಪ್ಟೆಂಬರ್ವರೆಗೆ ಕಣ್ಣಲ್ಲಿ ಉರಿಯೂತ ಕಾಣಿಸಿಕೊಂಡಿದ್ದರಿಂದ ಸರ್ಜರಿ ವಿಳಂಬವಾಯಿತು. ಈ ವೇಳೆ ಅದನ್ನು ಸರ್ಕಸ್ನಲ್ಲೇ ಇರಿಸಲಾಗಿತ್ತು. ಇದಾದ ಬೆನ್ನಲ್ಲೇ ಮರಿಗೆ ಬಂದಿದ್ದ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಂಡಿತು. ಪರಿಣಾಮ ತನ್ನ ವರ್ತನೆಯನ್ನು ಬದಲಿಸಿದ ಮರಿ ಗೋಡೆಗೆ ತಿವಿಯುವುದು ಮಾಡಲು ಆರಂಭಿಸಿತು. ಅಲ್ಲದೆ, ತನಗೆ ಏನಾಗುತ್ತಿದೆ ಎಂಬುದನ್ನು ಅರಿಯಲು ಆಗದೇ ತುಂಬಾ ಕೋಪದಿಂದ ವರ್ತಿಸಲು ಆರಂಭಿಸಿತು ಎಂದು ಸರ್ಕಸ್ ಕಂಪನಿ ಮಾಲೀಕ ನಿಕೊಲೇ ಡೊವ್ಗಾಲ್ಯುಕ್ ತಿಳಿಸಿದ್ದಾರೆ,
ಕಾಯಿಲೆ ಹೆಚ್ಚಾಗಿ ಕಣ್ಣಿನ ಪೊರೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ತಕ್ಷಣ ಕಣ್ಣುಗಳನ್ನು ತೆಗೆಯಲೇಬೇಕು, ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ಎಚ್ಚರಿಕೆ ನೀಡಿದೆವು. ಹೀಗಾಗಿ ಇದೀಗ ಸಿಂಹದ ಮರಿ ತನ್ನೆರಡು ಕಣ್ಣುಗಳನ್ನು ಕಳೆದುಕೊಂಡಿದ್ದು, ಸಂಪೂರ್ಣ ಕುರುಡಾಗಿದೆ ಎಂದು ಪ್ರಾಂತೀಯ ಪಶುವೈದ್ಯ ಸಮಿತಿಯ ಮುಖ್ಯಸ್ಥ ಗಾಲಿನಾ ಅಲಿಕೋವಾ ಹೇಳಿದರು.
ಗ್ರೊಮ್ ಫುಟ್ಬಾಲ್ನೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ತನ್ನೆರಡು ಕಣ್ಣುಗಳನ್ನು ಸಂಪೂರ್ಣ ಕಳೆದುಕೊಂಡಿರುವುದನ್ನು ಕಾಣಬಹುದಾಗಿದೆ. ಗ್ರೊಮ್ ಪ್ರಕರಣ ಇದೀಗ ರಷ್ಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಪ್ರಾಣಿಗಳ ಕಳ್ಳಸಾಗಾಣೆ ತಡೆಗೆ ಕಠಿಣ ಕ್ರಮವಹಿಸಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)