

ಬಾಗಲಕೋಟೆ: ಶಾಕ್ಗೆ ಒಳಗಾಗಿ ವಿದ್ಯುತ್ ಕಂಬದಿಂದ ಕೆಳಕ್ಕೆ ಬಿದ್ದು ಲೈನ್ಮ್ಯಾನ್ವೊಬ್ಬರು ಸಾವಿಗೀಡಾಗಿದ್ದಾರೆ. ಈ ಮೂಲಕ ಜೀವನೋಪಾಯಕ್ಕಾಗಿ ಇದ್ದ ಕೆಲಸ ಮಾಡುತ್ತಿದ್ದಾಗಲೇ ಅವರು ಜೀವ ಕಳೆದುಕೊಂಡಂತಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಪರಶುರಾಮ ಪಾಯಗೊಂಡ (30) ಸಾವಿಗೀಡಾದ ಲೈನ್ಮ್ಯಾನ್. ಸಾವಳಗಿಯ ಹೆಸ್ಕಾಂ ಸಿಬ್ಬಂದಿ ಆಗಿದ್ದ ಇವರು ಮೂಲತಃ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ನಿವಾಸಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ. ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.
ಕಾರ್ಯನಿರತವಾಗಿದ್ದಾಗ ವಿದ್ಯುತ್ ತಂತಿ ತಗುಲಿ ಆಘಾತಕ್ಕೆ ಒಳಗಾಗಿ ಕಂಬದಿಂದ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅದಾಗ್ಯೂ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂಬ ಆಕ್ರೋಶದಿಂದ ಗ್ರಾಮಸ್ಥರು ಜಂಬಗಿ ಬಿ.ಕೆ. ಗ್ರಾಮದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.