

ಬೆಂಗಳೂರು: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಚುರುಕಿನ ತನಿಖೆ ಕೈಗೊಂಡಿದ್ದಾರೆ.
ಸಾಹಿತಿಗಳಾದ ಕುಂ.ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಬಿ.ಟಿ. ಲಲಿತಾ ನಾಯಕ್, ಬಿ.ಎಲ್.ವೇಣು ಅವರಿಗೆ ಕಿಡಿಗೇಡಿಗಳು ಬೆದರಿಕೆ ಪತ್ರ ಬರೆದಿದ್ದರು. ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಿತ್ತು. ತನಿಖೆಗೆ ವಿಶೇಷ ತಂಡ ರಚನೆ ಮಾಡಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸಂಬಂಧ ದಾಖಲೆ ಪತ್ರಗಳನ್ನು ಪಡೆದಿದ್ದಾರೆ.
ಬೆದರಿಕೆ ಪತ್ರಗಳ ಬರಹದ ಜಾಡು ಹಿಡಿಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿ ವರದಿ ಪಡೆಯಲು ನಿರ್ಧರಿಸಿದೆ. ಅಂಚೆ ಕಚೇರಿ ಮೂಲಕ ಸಾಹಿತಿಗಳ ವಿಳಾಸಕ್ಕೆ ಪತ್ರಗಳು ಬಂದಿದ್ದು, ಯಾವ ಅಂಚೆ ಬಾಕ್ಸ್ ಮತ್ತು ಕಚೇರಿಯಿಂದ ಬಂದಿವೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದಲ್ಲದೆ, ಸಾಹಿತಿಗಳ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.