ಜೀವ, ಜೀವನ ಮುಖ್ಯ

Blogging
Published on

ತುಮಕೂರಿನಲ್ಲಿ ಇತ್ತೀಚೆಗೆ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕೆರೆಯೊಂದರ ಬಳಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಕಾಲುಜಾರಿ ಬಂಡೆಗಲ್ಲಿನ ಕೊರಕಲಿನಲ್ಲಿ ಬಿದ್ದು 12 ಗಂಟೆಗಳ ಬಳಿಕ ರಕ್ಷಣೆಯಾದ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಸೆಲ್ಪಿ ಫೋಟೋಗೋಸ್ಕರ ವಿದ್ಯಾರ್ಥಿಗಳು, ಯುವಜನರು ಈ ರೀತಿಯ ದುಸ್ಸಾಹಸ ಮಾಡುವುದು ಹೆಚ್ಚಾಗಿದೆ. ಇದರಿಂದ ಜೀವಕ್ಕೆ ಆಗುವ ಅಪಾಯವನ್ನೂ ಅವರು ಲೆಕ್ಕಿಸುತ್ತಿಲ್ಲ ಎಂಬುದು ಕಳವಳಕಾರಿ ಸಂಗತಿಯೇ ಹೌದು. ಪ್ರವಾಸಿತಾಣಗಳಿಗೆ ಭೇಟಿ ನೀಡುವುದು ಮನಸ್ಸಿನ ಆಹ್ಲಾದಕ್ಕಾಗಿ. ದೈನಂದಿನ ಒತ್ತಡದ ಬದುಕಿನಿಂದ ಒಂದಿಷ್ಟು ಸಮಯ ಹೊರಬಂದು, ಸಂತೋಷದ ಕ್ಷಣಗಳನ್ನು ಕಳೆಯಲು. ಸಂತೋಷದ ಸಮಯ ಕೇವಲ ಸೆಲ್ಪಿಗಳಲ್ಲಿ ಅಡಗಿಲ್ಲ. ನಿಸರ್ಗದೊಂದಿಗೆ ಒಂದಾಗುವ, ಪ್ರಕೃತಿಯ ಕೌತುಕಗಳನ್ನು ಅರಿಯುವ, ಅಲ್ಲಿನ ಬೆರಗುಗಳನ್ನು ತಿಳಿಯುವ, ಹೊಸ ಸಂಗತಿಗಳನ್ನು ಅರ್ಥೈಸಿಕೊಳ್ಳುವ ಅವಕಾಶವನ್ನು ನಮಗೆ ಪ್ರವಾಸ ಒದಗಿಸಿಕೊಡುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಮನಸ್ಸುಗಳು ಈ ಎಲ್ಲ ವೈಶಿಷ್ಟ್ಯಗಳಿಂದ ವಿಮುಖರಾಗಿ, ಕೇವಲ ಕ್ಷಣಿಕ ಸಂತೋಷಕ್ಕಾಗಿ ಹಾತೊರೆಯುತ್ತಿರುವುದು ಸೂಕ್ತವಲ್ಲ.

ಭೌಗೋಳಿಕ ಪ್ರದೇಶದ ಮಾಹಿತಿ ಇರದಿದ್ದರೂ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವಾಗ ಮತ್ತು ಅಪಾಯಕಾರಿ ಪ್ರದೇಶಗಳಲ್ಲಿ ವಿಭಿನ್ನ ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಯುವಕರ ಅತಿ ಉತ್ಸಾಹವೇ ದುರಂತಗಳಿಗೆ ಕಾರಣವಾಗುತ್ತಿದೆ. ಹಿಂದಿನ ಕೆಲ ಘಟನೆಗಳನ್ನು ಅವಲೋಕಿಸಿದಾಗ ಜೀವಹಾನಿಯಾದ ನಿದರ್ಶನಗಳೂ ಇವೆ. ತಂದೆ-ತಾಯಿ ಆತಂಕದ ಮನಸ್ಸಿನಿಂದಲೇ ಹದಿಹರೆಯದ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಿರುತ್ತಾರೆ. ಹೀಗೆ ಕಳುಹಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನೂ ತಿಳಿಸಿರುತ್ತಾರೆ. ಅಷ್ಟೇ ಅಲ್ಲ, ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ‘ನೀರಿನ ಆಳಕ್ಕೆ ಇಳಿಯಬೇಡಿ, ಮೊಸಳೆಗಳಿವೆ’, ‘ಈ ಪ್ರದೇಶಕ್ಕೆ ಪ್ರವೇಶ ನಿರ್ಬಂಧ’ ‘ಈ ಮಾರ್ಗದಲ್ಲಿ ಚಾರಣ ನಿಷಿದ್ಧ’ ಎಂಬೆಲ್ಲ ಸ್ಪಷ್ಟ ಸೂಚನೆಗಳನ್ನು ಸ್ಥಳೀಯ ವ್ಯವಸ್ಥೆ ಅಳವಡಿಸಿರುತ್ತದೆ. ಆದರೂ, ‘ನಿಯಮಗಳನ್ನು ಮೀರುವುದೇ ನಿಯಮ’ ಎಂಬಂತೆ ವರ್ತಿಸುವ ಕೆಲವರು ದುರಂತವನ್ನು ಆಹ್ವಾನಿಸಿಕೊಳ್ಳುತ್ತಾರೆ. ಮುಖ್ಯವಾಗಿ, ಇಂಥ ದುರಂತಗಳಲ್ಲಿ ಪ್ರಾಣಹಾನಿಯಿಂದ ಆಗುವ ನಷ್ಟ ಭರಿಸಲು ಅಸಾಧ್ಯ. ಪಾಲಕರ ಕನಸು ಭಗ್ನಗೊಳ್ಳುವುದಷ್ಟೇ ಅಲ್ಲ ಅವರು ಜೀವನಪೂರ್ತಿ ಕಣ್ಣೀರಿನಲ್ಲೇ ಕಾಲ ಕಳೆಯುವಂತಾಗುತ್ತದೆ. ಬಾಳಿ ಬದುಕಿ ಸಾಧನೆಯ ಪಥದಲ್ಲಿ ಸಾಗಬೇಕಾದ ಯುವಸಮೂಹ ಒಂದಿಷ್ಟು ವಿವೇಚನೆ, ಸಂಯಮ ಬೆಳೆಸಿಕೊಳ್ಳುವುದು ಅತ್ಯವಶ್ಯ.

ಪದೇಪದೆ ಇಂಥ ಘಟನೆಗಳು ಸಂಭವಿಸುತ್ತಿರುವುದರಿಂದ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ. ಎಲ್ಲಕ್ಕಿಂತ ಜೀವ ಮತ್ತು ಜೀವನ ಮುಖ್ಯ ಎಂಬುದನ್ನು ಅರಿಯಬೇಕಿದೆ. ಯುವಕರು ಗುಂಪು ಪ್ರವಾಸ ಕೈಗೊಂಡಾಗ ಈ ಬಗ್ಗೆ ಪರಸ್ಪರ ಅರಿವು ಮೂಡಿಸಿ, ಕ್ಷೇಮಕರವಾದ ಪ್ರವಾಸ ಕೈಗೊಳ್ಳುವುದು ಸೂಕ್ತ. ಏಕೆಂದರೆ, ಎಲ್ಲ ಪ್ರೇಕ್ಷಣೀಯ ತಾಣಗಳ ಬಳಿ ಸರ್ಕಾರದಿಂದ ಸಿಬ್ಬಂದಿಯನ್ನು ನಿಯೋಜಿಸಿ ಕಾಯುವುದು ಅಸಾಧ್ಯದ ಮಾತೇ ಸರಿ. ಹಾಗಾಗಿ ಜನರೇ ಈ ಬಗ್ಗೆ ಎಚ್ಚರದಿಂದ ಇರುವುದು ಒಳಿತು. ಈ ಘಟನೆಗಳು ಮುಂದಿನ ದಿನಗಳಲ್ಲಿ ಜನರಲ್ಲಿ ಸುರಕ್ಷತೆಯ ಭಾವವನ್ನು ಹೆಚ್ಚಿಸಲಿ. ಪ್ರಯಾಣವು ಜೀವಕ್ಕೆ ಕಂಟಕವಾಗದೆ, ಜೀವನಕ್ಕೆ ಸುಂದರ ನೆನಪುಗಳನ್ನು ಒದಗಿಸುವಂತಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net