

ಎನ್.ಆರ್.ಪುರ: ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿಂದ ವರಮಹಾಲಕ್ಷ್ಮೀ ಪೂಜೆ ಹಾಗೂ ಸಂಘದ ಸದಸ್ಯರಿಗಾಗಿ ಅಷ್ಟಲಕ್ಷ್ಮೀಯರ ವೇಷಭೂಷಣ ಸ್ಪರ್ಧೆ ನಡೆಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅಧಿದೇವತೆಯಾದರೆ ಸುಖ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾಲಕ್ಷ್ಮೀ ಅಧಿದೇವತೆ. ಯಾರಿಗೆ ಲಕ್ಷ್ಮೀ ವರ ನೀಡಿರುತ್ತಾಳೋ ಅಂಥವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇದೆ. ಬಹುತೇಕ ಜನರು ಸರಸ್ವತಿಗಿಂತ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಬಯಸುತ್ತಿರುವುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯ ಎಂದರು.
ಅಷ್ಟಲಕ್ಷ್ಮೀ ಸ್ಪರ್ಧೆಯಲ್ಲಿ 8 ಸದಸ್ಯೆಯರು ಭಾಗವಹಿಸಿದ್ದರು. ಚೈತ್ರಾ ರಮೇಶ್ ಪ್ರಥಮ, ಸೀಮಾ ಸದಾನಂದ್ ದ್ವಿತೀಯ ಹಾಗೂ ವಾಹಿನಿ ರವಿಶಂಕರ್ ತೃತೀಯ ಬಹುಮಾನ ಪಡೆದರು.
ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲಾ ಸತೀಶ್, ಖಜಾಂಚಿ ಭಾರತಿ ಚಂದ್ರು, ಸವಿತಾ ದಕ್ಷಿಣಾಮೂರ್ತಿ, ಪೂರ್ವಾಧ್ಯಕ್ಷರು, ಸದಸ್ಯರು ಇದ್ದರು.