

ಅಧಿಕಾರಕ್ಕೆ ಬಂದಾಗಿನಿಂದಲೂ ‘ಪಾರಸ್ಪರಿಕ ತೆರಿಗೆ’ (ರೆಸಿಪ್ರೋಕಲ್ ಟ್ಯಾಕ್ಸ್) ಬಗ್ಗೆ ಹಲವು ಬಾರಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಮಧ್ಯರಾತ್ರಿಯ ಬಳಿಕ (ಬುಧವಾರ ಬೆಳಗಿನ ಜಾವ 2 ಗಂಟೆಗೆ) ಪಾರಸ್ಪರಿಕ ತೆರಿಗೆಯನ್ನು ಘೋಷಿಸಲಿದ್ದಾರೆ. ಹೊರದೇಶಗಳಲ್ಲಿ ತಯಾರಾಗಿ ಅಮೆರಿಕಕ್ಕೆ ಬರುವ ಎಲ್ಲ ವಾಹನಗಳ ಆಮದಿನ ಮೇಲೆ ಏಪ್ರಿಲ್ 3ರಿಂದ ಶೇಕಡ 25ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಕಳೆದ ವಾರವಷ್ಟೇ ಘೋಷಿಸಿದ್ದಾರೆ. ಈ ಕ್ರಮದಿಂದ ವಾಹನಗಳ ಬೆಲೆ ಹೆಚ್ಚಿದರೂ, ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ವಾಹನಗಳ ಮೇಲೆ ಹೊಸ ಸುಂಕ ನೀತಿ ಜಾರಿಗೆ ಬಂದರೆ ವಾಹನ ತಯಾರಿಕೆಯ ಸರಾಸರಿ ಬೆಲೆ 4,711 ಡಾಲರ್ಗೆ ಹೆಚ್ಚಲಿದೆ.
ಇದು ಷೇರುಪೇಟೆಗಳಲ್ಲಿ ಈಗಾಗಲೇ ಭಾರಿ ಕಂಪನ ಸೃಷ್ಟಿಸಿದ್ದು, ಮುಂದಿನ ದಿನಗಳು ಮತ್ತಷ್ಟು ಸಂಕಷ್ಟಕ್ಕೆ ದೂಡಲಿವೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಕೆನಡಾ, ಮೆಕ್ಸಿಕೋ ಹಾಗೂ ಚೀನಾ ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘ಅಮೆರಿಕದ ಕ್ರಿಯೆಗೆ ನಾವು ತಕ್ಕ ಪ್ರತಿಕ್ರಿಯೆ ನೀಡುತ್ತೇವೆ. ಅಮೆರಿಕ ವಿಧಿಸುವಷ್ಟೇ ಸುಂಕವನ್ನು ವಿಧಿಸುತ್ತೇವೆ’ ಎಂದು ಹೇಳಿವೆ. ಈ ತೆರಿಗೆಯ ಸ್ವರೂಪ ಹೇಗಿರಲಿದೆ, ಯಾವ ರಾಷ್ಟ್ರಗಳಿಗೆ ಹೇಗೆ ಅನ್ವಯವಾಗಲಿದೆ ಮತ್ತು ಎಷ್ಟು ಅವಧಿಯವರೆಗೆ ಇರಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
‘ವಿದೇಶಿ ಸರಕುಗಳಿಂದ ಅಮೆರಿಕ ಬುಧವಾರ ವಿಮೋಚನೆ ಪಡೆಯಲಿದೆ’ ಎಂದು ಟ್ರಂಪ್ ಹೇಳಿದ್ದು, ಹಲವು ಖ್ಯಾತನಾಮ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು (ಸಿಇಒ) ಸರಣಿಯಾಗಿ ಶ್ವೇತಭವನದಲ್ಲಿ ಭೇಟಿ ಮಾಡಿ ಕಂಪನಿ, ಕಾರ್ಖಾನೆ ಸ್ಥಾಪನೆ ಕುರಿತಂತೆ ಚರ್ಚೆ ನಡೆಸಿದ್ದಾರೆ. ಆಮದು ಸುಂಕವನ್ನು ತಪ್ಪಿಸಲು ಬಿಲಿಯನ್ ಡಾಲರ್ಗಟ್ಟಲೇ ಹೂಡಿಕೆ ಮಾಡಿ ಎಂದು ಅಮೆರಿಕದ ಉದ್ಯಮಿಗಳಿಗೆ ಹುರಿದುಂಬಿಸುತ್ತಿದ್ದಾರೆ. ಆದರೆ, ಇದಕ್ಕೆ ಉದ್ಯಮಿಗಳು ಹೇಗೆ ಸ್ಪಂದಿಸಿದ್ದಾರೆ ಎಂಬುದರ ವಿವರ ಬಹಿರಂಗವಾಗಿಲ್ಲ. ಒಂದು ವೇಳೆ ಈಗ ಹೊಸ ಉದ್ಯಮಗಳು ಸ್ಥಾಪನೆಯಾದರೂ, ಅವುಗಳು ನೆಲೆಯೂರಿ, ಲಾಭ ಬರಲು ಕನಿಷ್ಠ 3-4 ವರ್ಷಗಳು ಬೇಕಾಗುತ್ತವೆ. ಅಷ್ಟು ಅವಧಿಗೆ ಅಮೆರಿಕ ತಾನೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ, ಇತರ ದೇಶಗಳನ್ನೂ ಆರ್ಥಿಕವಾಗಿ ಹಾನಿ ಮಾಡುತ್ತದೆಯೇ ಎಂಬ ಕಳವಳ ಮಾರುಕಟ್ಟೆ ತಜ್ಞರದ್ದು.
ಟ್ರಂಪ್ ಅವರ ಆರ್ಥಿಕ ನೀತಿಗಳು ಅಮೆರಿಕದ ಅರ್ಥವ್ಯವಸ್ಥೆಯ ಹಳಿ ತಪ್ಪಿಸಲಿವೆ ಎಂಬ ಆತಂಕ ತಜ್ಞರಿಂದಲೇ ವ್ಯಕ್ತವಾಗಿದೆ. ‘ಅಮೆರಿಕ ಫಸ್ಟ್’ ಎಂಬ ನೀತಿಯೇನೋ ಸರಿ. ಆದರೆ, ಈ ನೀತಿಯ ನೆಪದಲ್ಲಿ ಟ್ರಂಪ್ ಕೆನಡಾ ಮತ್ತು ಮೆಕ್ಸಿಕೋಗಳಂಥ ನೆರೆರಾಷ್ಟ್ರಗಳೊಂದಿಗೆ ಅವಮಾನ ಕಾರಿಯಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಯುರೋಪಿಯನ್ ರಾಷ್ಟ್ರಗಳು ಕೂಡ ಟ್ರಂಪ್ ಮೇಲಿನ ವಿಶ್ವಾಸ ಕಳೆದುಕೊಂಡಿವೆ ಎನ್ನುತ್ತಾರೆ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು.
ಬೇರೆ ದೇಶಗಳು ನಮ್ಮಿಂದ ಸಾಕಷ್ಟು ಲಾಭ ಪಡೆದುಕೊಂಡಿವೆ. ಅನ್ಯ ರಾಷ್ಟ್ರಗಳು ಅಮೆರಿಕದಲ್ಲಿ ಉದ್ಯಮ ನಡೆಸಬೇಕಾದರೆ ಒಂದಿಷ್ಟು ಸುಂಕ, ಶುಲ್ಕ ಭರಿಸಲೇಬೇಕಾಗುತ್ತದೆ. ಅದು ಅಮೆರಿಕದ ಅಭಿವೃದ್ಧಿಗೆ ಬಳಕೆಯಾಗುತ್ತದೆ. ನಮ್ಮ ದೇಶಕ್ಕೆ ಶತ್ರುಗಳಿಗಿಂತ ಸ್ನೇಹಿತರೇ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಮುಂದೆ ಹಾಗಾಗಬಾರದು. | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ, (ಎನ್ಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು)
ಟ್ರಂಪ್ ಕ್ರಮದಿಂದ ಅಮೆರಿಕದಲ್ಲಿ ಬೆಲೆಯೇರಿಕೆ ಹೆಚ್ಚಲಿದೆ. ಜನರು ದಿನಸಿ, ವಾಹನ ಸೇರಿ ದಂತೆ ಜೀವನಾವಶ್ಯಕ ವಸ್ತುಗಳ ಖರೀದಿಗೆ ಹೆಚ್ಚಿನ ಡಾಲರ್ ನೀಡಬೇಕಾಗುತ್ತದೆ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲದೆ, ಕಾಪೋರೇಟ್ ಆದಾಯ ದಲ್ಲೂ ಭಾರಿ ಇಳಿಕೆ ಕಾಣಲಿದೆ.
ಪಾರಸ್ಪರಿಕ ತೆರಿಗೆಯ ಹೊಡೆತ ಯುರೋಪಿಯನ್ ಒಕ್ಕೂಟ, ಭಾರತ, ಕೆನಡಾ, ದಕ್ಷಿಣ ಕೊರಿಯಾ, ಬ್ರೆಜಿಲ್ ಮೇಲೆ ಬೀಳಲಿದೆ.