

ಬೆಂಗಳೂರು: ಗ್ರೇಟರ್ ಬೆಂಗಳೂರಿನ ಐದು ಹೊಸ ಪಾಲಿಕೆಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸುವಂತೆ ಆಯೋಗಕ್ಕೆ ಪತ್ರ ಬರೆದಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎನ್. ಜವರಾಯಿಗೌಡ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಜಾರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಕೆಶಿ ಉತ್ತರಿಸಿದರು. ಮೇ 15ಕ್ಕೆ ಜಿಬಿಎ ಕಾಯ್ದೆ ಜಾರಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿ ಪ್ರದೇಶವನ್ನು ಪ್ರಾಧಿಕಾರದ ವ್ಯಾಪ್ತಿ ಎಂದು ಘೋಷಣೆ ಮಾಡಲಾಗಿದೆ. ಜು. 19ರಂದು 5 ಪಾಲಿಕೆ ರಚಿಸಲಾಗಿದೆ. ಆ. 18ವರೆಗೂ ತಿಂಗಳ ಕಾಲ ಆಕ್ಷೇಪ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ದಾಸರಹಳ್ಳಿ, ಆರ್.ಆರ್. ನಗರ, ಪದ್ಮನಾಭನಗರ, ಮಹಾದೇವಪುರ, ಯಶವಂತಪುರ ಕೆಲವು ವಿಧಾನಸಭಾ ಕ್ಷೇತ್ರಗಳು ಭಾಗ ಆಗಿವೆ ನಿಜ. ಕೆಲವು ಪ್ರದೇಶಗಳನ್ನು ಮುಂದಿನ ದಿನಗಳಲ್ಲಿ ಸೇರಿಸಬೇಕಿದೆ ಎಂದರು. ವಾರ್ಡ್‌ಗಳ ಮರುವಿಂಗಡಣೆ ನ.1ಕ್ಕೆ ನಡೆಯಲಿದೆ. ಇದಕ್ಕಾಗಿ ಪಾಲಿಕೆಯಲ್ಲಿ ಆಯುಕ್ತರ ನೇತೃತ್ವದ ಪ್ರತ್ಯೇಕ ತಂಡ ಇದೆ. ನ್ಯಾಯಾಲಯಕ್ಕೆ ಕಾಲಮಿತಿಯಲ್ಲಿ ಚುನಾವನೆ ನಡೆಸುವುದಾಗಿ ಅಫಿಡವಿಟ್ ಸಲ್ಲಿಸಿದ್ದೇವೆ. ವಾರ್ಡ್‌ಗಳ ರಚನೆ ಬಗ್ಗೆ ಮರುವಿಂಗಡಣೆ ಬಳಿಕ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.