

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ಪಕ್ಷದ ಸಂಘಟನಾತ್ಮಕ ವ್ಯವಸ್ಥೆಯಹಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕೆಂದು ಬಯಸಿದ್ದ ಪಕ್ಷದ 23 ಹಿರಿಯ ನಾಯಕರಲ್ಲಿ ಆನಂದ ಶರ್ಮ ಕೂಡ ಒಬ್ಬರು.
ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇಕೆ ಎಂಬುದಕ್ಕೆ ಆನಂದ ಶರ್ಮ ವಿವರಣೆ ನೀಡಿದ್ದಾರೆ. ದೇಶದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಎಲ್ಲರ ಮನದಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಉದ್ದೇಶವಾಗಿತ್ತು. ಎಲ್ಲರೂ ಪಕ್ಷದ ಬಗ್ಗೆ ಹೃದಯದಲ್ಲಿ ಒಳ್ಳೆಯ ಭಾವನೆಯನ್ನಿಟ್ಟುಕೊಂಡೇ ಇದನ್ನು ಬರೆದಿದ್ದರು ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿಗೆ ಪತ್ರ ಬರೆದ ವಿಚಾರ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಜತೆಗೆ ಹಲವು ಇದನ್ನು ಟೀಕಿಸಿದ್ದರು. ಸ್ವತಃ ರಾಹುಲ್ ಗಾಂಧಿ ಕೂಡ ಈ ಬೆಳವಣಿಗೆ ಬಗ್ಗೆ ಕೆಂಡವಾಗಿದ್ದರು.
ಆದರೆ, ನಾವು ಬಂಡಾಯಗಾರರಲ್ಲ, ಪಕ್ಷದ ಪುನಶ್ಚೇತನ ಬಯಸುತ್ತಿರುವವರು ಎಂದು ಪತ್ರ ಬರೆದವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಪಕ್ಷಕ್ಕೆ ಪೂರ್ಣಕಾಲಿಕ, ಸಕ್ರಿಯ ಹಾಗೂ ಗೋಚರ ವ್ಯಕ್ತಿತ್ವದ ನಾಯಕತ್ವ ಅಗತ್ಯವಿದೆ. ರಾಜ್ಯ ಘಟಕಗಳಿಗೆ ಹೆಚ್ಚಿನ ಅಧಿಕಾರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪುನಾರಚನೆ ಮೊದಲಾದ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದದ್ದು ಬಂಡಾಯವಲ್ಲ, ಪಕ್ಷದ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ನೀಡಲಾದ ಸಲಹೆಗಳಾಗಿದ್ದವು. ಎಲ್ಲರೂ ಇದನ್ನು ಓದಿದ್ದಾರೆ ಎಂದು ಭಾವಿಸಿರುವುದಾಗಿ ಆನಂದ ಶರ್ಮ ಹೇಳಿದ್ದಾರೆ.