

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ, ಪ್ರತ್ಯೇಕ ಸಭೆ ನಡೆಸುವುದರೊಂದಿಗೆ ತೀವ್ರ ಅಸಮಾಧಾನ ಹೊರಹಾಕಿದ್ದ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇಂದು ಉಚ್ಛಾಟನೆ ಮಾಡಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ. ಜೆಡಿಎಸ್ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯದ ಜನತಾದಳ ಘಟಕದ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಎಚ್ಡಿಕೆ, "ರಾಜ್ಯದ ಜನತಾದಳ ಘಟಕದ ಹಂಗಾಮಿ ಅಧ್ಯಕ್ಷರನ್ನಾಗಿ ನನ್ನನ್ನು ನೇಮಕ ಮಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರಿಗೆ ನನ್ನ ಕೃತಜ್ಞತೆಗಳು. ಈ ಒಮ್ಮತದ ನಿರ್ಧಾರಕ್ಕೆ ಕಾರಣರಾದ ಪಕ್ಷದ ಎಲ್ಲಾ ಮುಖಂಡರು, ಕೋರ್ ಕಮಿಟಿಯ ಎಲ್ಲಾ ಪ್ರಮುಖರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು" ಎಂದರು.
"ಪಕ್ಷಕ್ಕೆ ನವಚೈತನ್ಯ ತುಂಬುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ವಿಜಯದಶಮಿ ನಂತರ ಸಂಘಟನೆಯನ್ನು ಆರಂಭಿಸೋಣ. ಎಲ್ಲರ ಸಹಕಾರ ಇರಲಿ ಎಂದು ಕೋರುತ್ತೇನೆ" ಎಂದು ಟ್ವೀಟ್ ಮಾಡಿ ತಿಳಿಸಿದರು.