ಚುನಾವಣಾ ಧರ್ಮಯುದ್ಧ ಜಯಿಸೋಣ ಡಾ ಸಿ ಎನ್ ಮಂಜುನಾಥ್ ಕರೆ

DR Manjunath
Published on

ರಾಮನಗರ: ‘ಲೋಕಸಭಾ ಚುನಾವಣೆಯು ಧರ್ಮಯುದ್ಧವಾಗಿದ್ದು, ಅದನ್ನು ನಾವು ಜಯಿಸುವ ಮೂಲಕ ನಿಸ್ವಾರ್ಥ ಸೇವೆಯೊಂದಿಗೆ ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಕಾರ್ಯಕರ್ತರಲ್ಲಿ ಉತ್ಸಾಹ ತಂಬಿದರು.

ಅಭ್ಯರ್ಥಿ ಘೋಷಣೆ ಬಳಿಕ ಪ್ರಥಮ ಬಾರಿಗೆ ಆಗಮಿಸಿದ ಸಲ ನಗರದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚುನಾವಣೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಸುಳ್ಳು ಇತ್ತೀಚಿನ ದಿನಗಳಲ್ಲಿ ವೃತ್ತಿಯಾಗಿದೆ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಬಂದಿದೆ. ಬಲೆ ಹಾಕುವ ಕೌಶಲವಿದ್ದರೆ ಮೀನು ಸಿಗುತ್ತದೆ. ಈಜು ಗೊತ್ತಿದ್ದರೆ ಸಾಗರದ ಮುತ್ತು ಸಿಗುತ್ತದೆ. ಏನೂ ಗೊತ್ತಿಲ್ಲದಿದ್ದರೆ ಕೇವಲ ನೆಲ ಸಿಗುತ್ತದೆ. ಈ ಚುನಾವಣೆಯಲ್ಲಿ ನಾವು ಒಳ್ಳೆಯ ಈಜುಗಾರರಾಗಬೇಕು. ಆಗ ಮಾತ್ರ ನಮಗೆ ಗೆಲುವಿನ ಮುತ್ತು ಸಿಗುತ್ತದೆ ಎಂದರು.

ರಾಜಕೀಯ ಮಾಡಲು ಸ್ಪರ್ಧಿಸಿಲ್ಲ
ನಾನು ರಾಜಕೀಯ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಸುಮಾರು 40 ವರ್ಷ ಹೃದ್ರೋಗ ಚಿಕಿತ್ಸೆ ಆಸ್ಪತ್ರೆಯಲ್ಲಿ ಸೇವೆ ಮಾಡಿ, ನಿವೃತ್ತನಾದ ಬಳಿಕ ರಾಜಕಾರಣಕ್ಕೆ ಬಂದಿದ್ದೇನೆಯೇ ಹೊರತು, ಅರ್ಧದಲ್ಲೇ ಬಿಟ್ಟು ಬಂದಿಲ್ಲ.

ನನ್ನ ಸೇವೆ ಗಮನಿಸಿದ ಪಕ್ಷಾತೀತ ಸ್ನೇಹಿತರು, ಬೇರೆ ಕ್ಷೇತ್ರಗಳ ತಜ್ಞರು ಹಾಗೂ ಹಿತೈಷಿಗಳು, ನೀವು ಮಾಡಿರುವ ಸೇವೆ ಮತ್ತು ಕ್ರಾಂತಿಕಾರಿ ಬದಲಾವಣೆಗಳು ರಾಷ್ಟ್ರಮಟ್ಟಕ್ಕೆ ವಿಸ್ತರಿಸಬೇಕು ಎಂದು ಹೇಳುತ್ತಿದ್ದರು. ಅದಕ್ಕೊಂದು ವೇದಿಕೆ ಬೇಕಿರುವುದರಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ತಮ್ಮ ಎದುರಾಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net