

ನಮ್ಮಲ್ಲಿ ಆಗಾಗ ಕಾಲ್ತುಳಿತದಿಂದ, ನೂಕುನುಗ್ಗಲಿನಿಂದ ಹಲವಾರು ಸಾವು ನೋವುಗಳ ದುರಂತಗಳು ವರದಿಯಾಗುತ್ತಲೇ ಇರುತ್ತವೆ. ತಿರುಪತಿ, ಪ್ರಯಾಗರಾಜ್, ದೆಹಲಿ ರೈಲು ನಿಲ್ದಾಣ ಇವೆಲ್ಲ ಇತ್ತೀಚಿನ ಉದಾಹರಣೆಗಳು. ಈ ದೌರ್ಭಾಗ್ಯಕರ ಘಟನೆಗಳಿಗೆ ಮುಖ್ಯ ಕಾರಣವೆಂದರೆ ನಮ್ಮಲ್ಲಿ ಸರದಿ ಪದ್ಧತಿಯನ್ನು ಪಾಲಿಸದೆ, ನಾ ಮುಂದು, ತಾ ಮುಂದು ಎಂದು ಒಮ್ಮೆಲೇ ನುಗ್ಗುವ ದುರಭ್ಯಾಸ. ವಾಹನ ಚಲಾಯಿಸುವವರಿಗೂ ಹಾಗೆಯೇ, ಇನ್ನೊಂದು ವಾಹನವನ್ನು ಹಿಂದಿಕ್ಕುವ ಅವಸರ. ಎಲ್ಲಿಯವರೆಗೆ ತಾಳ್ಮೆಯೆನ್ನುವುದು ನಮಗೆ ಮುಖ್ಯವೆಂದು ಕಾಣಿಸುವುದಿಲ್ಲವೋ ಅಲ್ಲಿಯವರೆಗೆ ತಪ್ಪಿಸಬಹುದಾದ ಇಂತಹ ಶೋಚನೀಯ ಪರಿಸ್ಥಿತಿಗಳಿಗೆ ನಾವು ದಾಸರಾಗಿಯೇ ಇರಬೇಕಾಗುವುದು.
‘ಉಚಿತ ಯೋಜನೆಗಳಿಂದ ನಾವು ಪರಾವಲಂಬಿವರ್ಗವನ್ನು ಸೃಷ್ಟಿಸುತ್ತಿಲ್ಲವೇ?’ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ರಾಜಕೀಯ ಪಕ್ಷಗಳನ್ನು ಎಚ್ಚರಿಸಿರುವುದು ಗಮನಾರ್ಹ. ಹೀಗೆಯೇ ‘ಉಚಿತ ಯೋಜನೆ’ಗಳು ಮತದಾರರ ಮೇಲೆ ಪರಿಣಾಮ ಬೀರಿ ಪ್ರಾಮಾಣಿಕ ಚುನಾವಣೆ ನಡೆಸಲು ಸಾಧ್ಯವಿಲ್ಲ ಎನ್ನುವ ಚಿಂತಕರ ವಿಶ್ಲೇಷಣೆಯ ಬಗ್ಗೆ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿ, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ. ಇದರಿಂದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಚುನಾವಣೆ ವ್ಯವಸ್ಥೆ ಸುಧಾರಿಸಿ, ವಿಶ್ವಕ್ಕೆ ಮಾದರಿಯಾಗಲು ಸಾಧ್ಯ.