ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ

ravishankar Guruji
Published on

ಬೆಂಗಳೂರು: ಪ್ರತಿಯೊಂದು ಭಾಷೆಗೂ ತನ್ನದೇ ಆದ ವಿಲಕ್ಷಣವಾದ ಗುಣವಿರುತ್ತದೆ. ಆದರೆ ಸ್ವಲ್ಪ ಗಹನವಾಗಿ ಯೋಚಿಸಿದಾಗ ಎಲ್ಲಾ ಭಾಷೆಗಳೂ ಯಾವುದೋ ಒಂದು ಕಡೆ ಪರಸ್ಪರ ಸಂಬಂಧವನ್ನು ಹೊಂದಿರುತ್ತವೆ ಎಂಬುದನ್ನು ಗಮನಿಸಬಹುದು. ಆಂಗ್ಲ ಭಾಷೆಯಲ್ಲಿಯೇ ನೂರಕ್ಕೆ 70ರಷ್ಟು ಶಬ್ದಗಳ ಮೇಲೆ ಸಂಸ್ಕೃತದ ಪ್ರಭಾವವಿರುವುದನ್ನು ನೀವು ಕಾಣಬಹುದು.  ಹ್ಯಾಂಡ್ ಮತ್ತು ಹಸ್ತ, ಡೆಂಟ್ ಮತ್ತು ದಂತ, ನೋಸ್‌ ಮತ್ತು ನಾಸಿಕ ಮುಂತಾದ ಶಬ್ದಗಳ ನಡುವೆ ಸಾಮ್ಯತೆಯನ್ನು ನೋಡಬಹುದು. ಈ ರೀತಿಯಾಗಿ, ಭಾಷೆಗಳೆಲ್ಲ ಎಲ್ಲೋ ಒಂದು ಕಡೆ ಒಂದಾಗುತ್ತವೆ. ಆದರೆ, ಚೈತನ್ಯಶಕ್ತಿಯು ಭಾಷೆಗಳನ್ನು ಮೀರಿದ್ದು. “ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ” - ಎಲ್ಲಿ ಮನಸ್ಸಿನ ಜೊತೆ ಎಲ್ಲ ಭಾಷೆಗಳೂ ವಿಲೀನವಾಗಿ ಬಿಡುತ್ತವೆಯೋ ಅಂತಹ  ಶುದ್ಧ ಚೈತನ್ಯವಾಗಿರುತ್ತೇವೆ, ನಾವೆಲ್ಲರೂ. ಇದನ್ನು ಧ್ಯಾನದಿಂದ ಮಾತ್ರ ಅನುಭವಿಸಬಹುದು.

ಇಷ್ಟಿದ್ದರೂ ನಮ್ಮ ಸುಪ್ತಚೈತನ್ಯದಲ್ಲಿ ನಮ್ಮ ಮಾತೃಭಾಷೆ ಅಂಕಿತವಾಗಿರುತ್ತದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಕನ್ನಡದಲ್ಲಿ ಅಭ್ಯಾಸ ಮಾಡಿದವರು ವಿದೇಶಗಳಿಗೆ ಹೋದಾಗ ಅಲ್ಲಿನ ಭಾಷೆಯನ್ನೇ ಆಡುತ್ತಿದ್ದರೂ ಎಣಿಕೆ ಮಾಡುವಾಗ ಒಂದು, ಎರಡು, ಮೂರು… ಎಂದು ಕನ್ನಡದಲ್ಲಿಯೇ ಎಣಿಸುತ್ತಾರೆ. ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡುವಾಗ ಕನ್ನಡದಲ್ಲಿಯೇ ಎಣಿಕೆ ಬರುತ್ತದೆ. ಈ ರೀತಿಯಾಗಿ ಮಾತೃಭಾಷೆ ನಮ್ಮ ಅಂತರಾಳದಲ್ಲಿ ಅಚ್ಚೊತ್ತಿದಂತೆ ಇರುತ್ತದೆ. ಅದು ಒಳ್ಳೆಯದೇ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಹೆಚ್ಚು  ಚುರುಕಾಗಿರುತ್ತಾರೆ. ನಾವು ಆಂಗ್ಲ ಭಾಷೆಯನ್ನು ಮಕ್ಕಳ ಮೇಲೆ ಹೇರುತ್ತಿದ್ದೇವೆ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳು  ಜೀವನದಲ್ಲಿ ಮೇಲೆ ಬರುವುದಿಲ್ಲ ಎಂಬ ಒಂದು ತಪ್ಪು ಅಭಿಪ್ರಾಯವಿದೆ. ನಾವೆಲ್ಲ ಓದಿದ್ದು ಕನ್ನಡದಲ್ಲಿಯೇ. ನಾವು ಶಾಲೆಗೆ ಹೋಗುತ್ತಿದ್ದಾಗ ಆಂಗ್ಲ ಶಬ್ದಗಳ ಉಚ್ಚಾರಣೆಯ ಬಗ್ಗೆ ಗೊಂದಲ ಉಂಟಾದಾಗ ಶಬ್ದದ ಕೆಳಗಡೆ ಕನ್ನಡದಲ್ಲಿ ಬರೆದುಕೊಳ್ಳುತ್ತಿದ್ದೆವು. ಆಂಗ್ಲ ಭಾಷೆಯಲ್ಲಿ ಬರೆಯುವುದೇ ಒಂದು ರೀತಿ, ಓದುವುದು ಇನ್ನೊಂದು ರೀತಿ. ನಾಲೆಜ್ ಎಂಬ ಶಬ್ದಕ್ಕೆ ಕ್ನಾಲೆಡ್ಜ್‌ ಎಂದು ಸ್ಪೆಲ್ಲಿಂಗ್ ಬರೆಯುತ್ತಾರೆ. ಬರೆಯುವುದೊಂದು ಹೇಳುವುದೊಂದು ಎಂದು ನಮಗೆಲ್ಲ ಭ್ರಮೆಯಾಗುತ್ತಿತ್ತು.

ಭಾರತೀಯ ಭಾಷೆಗಳು ಅತ್ಯಂತ ಶ್ರೀಮಂತವಾಗಿವೆ ಹಾಗೂ ಸತ್ವಯುತವಾಗಿವೆ.  ಭಾರತೀಯ ಭಾಷೆಗಳಲ್ಲಿ ಶಬ್ದ ಮತ್ತು ಅರ್ಥ ಒಂದಕ್ಕೊಂದು ಹೊಂದಿಕೊಂಡಿರುತ್ತವೆ. ನಾಡು, ನುಡಿ, ನೆಲ, ಜಲಗಳನ್ನು ಸಂರಕ್ಷಣೆ ಮಾಡಬೇಕು ಎನ್ನುತ್ತೇವೆ. ಅದರಲ್ಲೂ ನಮ್ಮ ಕನ್ನಡ ನುಡಿಯ ಸಂರಕ್ಷಣೆಯನ್ನು ನಾವು ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ. ನಾವು ಬೇರೆ ಭಾಷೆಗಳನ್ನು ಬಹಳ ಸುಲಭವಾಗಿ ಕಲಿತುಕೊಳ್ಳುತ್ತೇವೆ. ಇತರ ರಾಜ್ಯಗಳ ಜನ ನಮ್ಮ ರಾಜ್ಯಕ್ಕೆ ಬಂದರೆ ಅವರೆಲ್ಲ ಅವರವರ ಭಾಷೆಗಳಲ್ಲಿಯೇ ಮಾತನಾಡಿಕೊಳ್ಳುತ್ತಿರುತ್ತಾರೆ, ನಾವೂ ಅವರ ಭಾಷೆಯಲ್ಲಿಯೇ ಮಾತನಾಡುತ್ತೇವೆ. ನಾವು ನಮ್ಮ ಭಾಷೆಯನ್ನು ಅವರಿಗೆ ಕಲಿಸುವ ಗೋಜಿಗೇ  ಹೋಗುವುದಿಲ್ಲ. ಕನ್ನಡೇತರರಿಗೂ ಕನ್ನಡವನ್ನು ಪರಿಚಯಿಸುವ ಕೆಲಸವನ್ನು ನಾವು ಮಾಡಬೇಕು.

ಕನ್ನಡದ ಬಗ್ಗೆ ಅಭಿಮಾನವಿರಲಿ: ಕನ್ನಡದ ವಚನ ಸಾಹಿತ್ಯ, ದಾಸ ಸಾಹಿತ್ಯಗಳು ತುಂಬಾ ಅರ್ಥಗರ್ಭಿತವಾಗಿರುತ್ತವೆ. ಇವುಗಳ   ಪ್ರಚಾರ, ಪ್ರಸಾರ ಹೆಚ್ಚಾಗಬೇಕು. ಶಾಲಾ ಪಠ್ಯಗಳಲ್ಲಿಯೂ ಇವನ್ನೆಲ್ಲ ಕಡಿಮೆ ಮಾಡಿದ್ದಾರೆ ಎಂದು ಕೇಳಿದ್ದೇವೆ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ”  ಎಂದು ನಾವೆಲ್ಲ ಚಿಕ್ಕಂದಿನಿಂದ ಕೇಳಿಸಿಕೊಂಡೇ ಬೆಳೆದಿದ್ದೇವೆ. ಇಂತಹ ವಚನಗಳು ಚಿಕ್ಕ ಮಕ್ಕಳಿಗೆ ಹೃದ್ಗತವಾಗಿರುತ್ತಿದ್ದವು.  ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಮುನ್ನೆಲೆಗೆ ತರಬೇಕು. ಕನ್ನಡದ ಚಲನಚಿತ್ರಗಳು ಹೆಚ್ಚು ಪ್ರಾಮುಖ್ಯತೆಯನ್ನು  ಪಡೆಯಬೇಕು. ಮಾಧ್ಯಮಗಳ ಮೂಲಕವೂ  ಕನ್ನಡ ಭಾಷೆಯ ಉತ್ಥಾನ ಮಾಡಬೇಕಾಗುತ್ತದೆ. ಕನ್ನಡಿಗರಲ್ಲಿ ಸ್ವಾಭಿಮಾನ ಜಾಗೃತವಾಗಬೇಕು. ಶ್ರೀಲಂಕಾದಲ್ಲಿರುವ ತಮಿಳರಲ್ಲಿ ಅದೆಷ್ಟು ಸ್ವಾಭಿಮಾನ ತುಂಬಿಕೊಂಡಿದೆಯೆಂದರೆ ಅವರು ʼಐಸ್ ಕ್ರೀಂʼ ಎಂಬುದಕ್ಕೂ ಕೂಡ ʼಕುಳಿರ್‌ ನೀರ್ ಕಳಿʼ ಎಂದು ತಮ್ಮದೇ ಆದ ಶಬ್ದವನ್ನು ಸೃಷ್ಟಿಸಿಕೊಂಡಿದ್ದಾರೆ. ಅವರು ಜಗತ್ತಿನ ಯಾವುದೇ ಮೂಲೆಗೆ ಹೋದರೂ ತಮ್ಮ ಭಾಷೆಯನ್ನು ಅಭಿಮಾನದಿಂದ ಬಳಸುತ್ತಾರೆ. ಕನ್ನಡಿಗರಲ್ಲಿ ಅಂತಹ ಅಭಿಮಾನ ಬೆಳೆಯಬೇಕು.  ಕರ್ನಾಟಕದ ಒಳನಾಡುಗಳಲ್ಲಿ ಕನ್ನಡದ ಬಳಕೆ ಮತ್ತು ಅಭಿಮಾನ ಇಂದಿಗೂ ಇದೆ. ಆದರೆ ನಮ್ಮ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಅಭಿಮಾನವನ್ನು ಬೆಳೆಸುವ ಕೆಲಸವಾಗಬೇಕು. ರಾಜ್ಯೋತ್ಸವವನ್ನು ಆಚರಿಸುವ ಮೊದಲು ರಾಜ್ಯದ ಭಾಷೆಯನ್ನು ಸನ್ಮಾನಿಸಬೇಕು. ನಮ್ಮ ಭಾಷೆಯಲ್ಲಿ ಮಾತನಾಡಬೇಕು.

ಕರ್ನಾಟಕದ ಆಹಾರ ಪದ್ಧತಿಯನ್ನು ಎತ್ತಿ ಹಿಡಿಯಬೇಕು. ಕರ್ನಾಟಕದ ಹೋಳಿಗೆ, ಆಂಬೊಡೆ ಮುಂತಾದ ತಿಂಡಿಗಳು ಬೇರೆಲ್ಲಿಯೂ ಸಿಗುವುದಿಲ್ಲ. ಕರ್ನಾಟಕಕ್ಕೇ ವಿಶಿಷ್ಟವಾದ ಬಿಸಿಬೇಳೆ ಬಾತ್‌,  ಗೊಜ್ಜವಲಕ್ಕಿ, ರಾಗಿಮುದ್ದೆ ಮುಂತಾದವುಗಳನ್ನು  ಹೆಚ್ಚು ಹೆಚ್ಚಾಗಿ ಬಳಕೆಯಲ್ಲಿ ತರಬೇಕು. ಮುದ್ದೆ ತಿನ್ನುವವರು ಎಂದರೆ  ಅಸಂಸ್ಕೃತರು ಅಥವಾ ಹಿಂದುಳಿದವರು ಎಂಬ ಭಾವನೆ ಇದೆ. ಈ ರೀತಿ ಅನ್ನಿಸಕೂಡದು. ಜನರಿಗೆ ತಮ್ಮ ಭಾಷೆ, ವೇಷ, ಆಹಾರಗಳ ಬಗ್ಗೆ ಅಭಿಮಾನವಿರಬೇಕು.

ಸುಭದ್ರ ಸಮಾಜದ ಪುನರ್ನಿರ್ಮಾಣ: ರಾಜ್ಯದಲ್ಲಿ ಸ್ವಚ್ಛ, ಪ್ರಸನ್ನ ಸಮಾಜದ ನಿರ್ಮಾಣ ಯುವಕರ ಕರ್ತವ್ಯ.  ಹಿಂದೆ, ಅರವತ್ತು-ಎಪ್ಪತ್ತರ ದಶಕಗಳಲ್ಲಿ ಬೆಂಗಳೂರು, ಮೈಸೂರುಗಳಲ್ಲಿ ಕಳ್ಳತನವೇ ಇರಲಿಲ್ಲ. ಒಂದು ರೀತಿಯ ರಾಮರಾಜ್ಯವಿತ್ತು. ಮೈಸೂರಿನಲ್ಲಿ  ಎಲ್ಲಿಯಾದರೂ ನೀವು ಏನನ್ನಾದರೂ ಬಿಟ್ಟು ಬಂದಿದ್ದರೆ ಅದು ಅಲ್ಲಿಯೇ ಇರುತ್ತಿತ್ತು. ನೀವು ಅಲ್ಲಿಗೆ ಮತ್ತೆ ಹೋಗಿ ತೆಗೆದುಕೊಳ್ಳಬಹುದಿತ್ತು. ಅಂದಿನ ಕಾಲದಲ್ಲಿ ಮೈಸೂರಿನಲ್ಲಿ ಅತಿಥಿಗೃಹಗಳಿರುತ್ತಿರಲಿಲ್ಲ. ಆದರೆ ಪ್ರತಿಯೊಂದು ಮನೆಯೂ ಅತಿಥಿಗಳನ್ನು ಉಪಚರಿಸಲು ಸಿದ್ಧವಾಗಿರುತ್ತಿತ್ತು.  ಜನರು ತಮ್ಮ ಮನೆಯ ಬಾಗಿಲುಗಳನ್ನು ತೆರೆದು, ಮನೆಯ ಹಿಂದೆ ಮುಂದೆ ಹಾಸಿಗೆಗಳನ್ನು ಹಾಕಿ ಅತಿಥಿಗಳನ್ನು ಸ್ವಾಗತಿಸುತ್ತಿದ್ದರು. ಮನೆಯವರೆಲ್ಲ ಸೇರಿ ಸುಮಾರು ಐವತ್ತು ಅರವತ್ತು ಜನರಿಗಾಗುವಷ್ಟು ಅಡುಗೆ ಮಾಡುತ್ತಿದ್ದರು. ಯಾರು ಬೇಕಾದರೂ ಬಂದು ಅವರ ಮನೆಗಳಲ್ಲಿಯೇ ಊಟ ಮಾಡಿ ಮಲಗಿ ಎದ್ದು ಹೋಗಬಹುದಿತ್ತು. ಇಂತಹ ಸಮಾಜವನ್ನು ನಿರ್ಮಿಸಲು ಯುವಕರು ಸಂಕಲ್ಪ ಮಾಡಬೇಕು.

ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ತಿಂಗಳು ಮದ್ಯಪಾನವನ್ನು ನಿಷೇಧಿಸುತ್ತೇವೆ, ವರ್ಜಿಸುತ್ತೇವೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಉತ್ಸವವನ್ನು ಆಚರಿಸೋಣ, ಆದರೆ ಮದ್ಯವನ್ನು ದೂರವಿರಿಸೋಣ. ಬೀಡಿ, ಸಿಗರೇಟುಗಳ ಸೇವನೆಯನ್ನು ಈ ಪವಿತ್ರ ತಿಂಗಳಿನಲ್ಲಿ ವರ್ಜಿಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ. ಸಸ್ಯಾಹಾರಿಯಾಗಲು ಎಲ್ಲರಿಗೂ ಪ್ರೇರಣೆ ನೀಡೋಣ. ಈ ಮೂಲಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ.

-ಶ್ರೀ ಶ್ರೀ ರವಿಶಂಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net