ದೇಗುಲದಲ್ಲಿ ಹೆಣ್ಣು ಮಕ್ಕಳಿಗೂ ಪೂಜಾ ಸರದಿ ನೀಡಿ

ವಿಜಯವಾಣಿ (5)
Published on

ಮೂಗೂರು(ಮೈಸೂರು): ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇಗುಲದಲ್ಲಿ ವಂಶಪಾರಂಪರ್ಯವಾಗಿ ಬಂದಿರುವ ತಂದೆಯ ಪೂಜಾ ಸರದಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ನೀಡಬೇಕು ಎಂದು ತಿ.ನರಸೀಪುರ ಜೆಎಂಎಫ್ ಕೋರ್ಟ್ ಅನುಮತಿ ಆದೇಶದೊಂದಿಗೆ ಬಂದವರಿಗೆ ಗ್ರಾಮಸ್ಥರು ಅವಕಾಶ ನಿರಾಕರಿಸಿದ್ದಾರೆ.

ಈ ಸಂಬಂಧ ಶನಿವಾರ ನಡೆದ ಸಂಧಾನ ಸಭೆಯೂ ವಿಫಲವಾಗಿದೆ. ಗ್ರಾಮದ ಅರ್ಚಕರಾಗಿದ್ದ ದಿ.ತ್ರಿಪುರಾಂತಯ್ಯ ಅವರಿಗೆ ಪತ್ನಿ, ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ. ತಂದೆಯ ಪೂಜಾ ಸರದಿ ತಮಗೂ ನೀಡಬೇಕು ಎಂಬ ವಿಚಾರವಾಗಿ ಅರ್ಚಕರ ಹೆಣ್ಣುಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದರು. ಪೂಜೆಗೆ ಅವಕಾಶ ಕಲ್ಪಿಸುವಂತೆ ಜೆಎಂಎಫ್​ಸಿ ಕೋರ್ಟ್ ನೀಡಿದ ಆದೇಶದೊಂದಿಗೆ ಗ್ರಾಮಕ್ಕೆ ಬಂದಿದ್ದರು. ಆದರೆ ಗ್ರಾಮದ ಎಲ್ಲ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಸಭೆ ನಡೆಸಿ, ಅರ್ಚಕರ ಹೆಣ್ಣುಮಕ್ಕಳಿಗೆ ದೇವಾಲಯದಲ್ಲಿ ಪೂಜೆ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಎಂ.ಡಿ.ಬಸವರಾಜು ಮಾತನಾಡಿ, ಸರ್ಕಾರ ಹಾಗೂ ಕೋರ್ಟ್ ಆದೇಶಕ್ಕೆ ನಾವೆಲ್ಲರೂ ಗೌರವ ನೀಡುತ್ತೇವೆ. ಆದರೆ ತ್ರಿಪುರಾಂತಯ್ಯ ಅವರ ಮಗ ಶಿವಕುಮಾರ ಈಗಾಗಲೇ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಪೂಜೆ ಮಾಡಲು ಯಾವುದೇ ತೊಡಕಾಗದಂತೆ ಬೆಂಬಲ ನೀಡಲಾಗುವುದು. ಅರ್ಚಕರ ಹೆಣ್ಣುಮಕ್ಕಳಿಗೆ ಪೂಜೆ ಮಾಡಲು ಈಗ ಅವಕಾಶ ನೀಡಿದರೆ, ಎಲ್ಲ ಅರ್ಚಕರ ಹೆಣ್ಣುಮಕ್ಕಳಿಗೂ ಅವಕಾಶ ನೀಡಬೇಕಾಗುತ್ತದೆ. ಆಗ ಪೂಜಾ ವ್ಯವಸ್ಥೆ ಹದಗೆಡುತ್ತದೆ. ದೇವಸ್ಥಾನದ ವಿಚಾರದಲ್ಲಿ ಗ್ರಾಮಸ್ಥರ ನಿರ್ಧಾರವೇ ಅಂತಿಮ ಎಂದು ಹೇಳಿದರು.

ಇದಕ್ಕೆ ಒಪ್ಪದ ಹೆಣ್ಣು ಮಕ್ಕಳು, ಕೋರ್ಟ್ ಆದೇಶದಂತೆ ನಮಗೆ ಹಾಗೂ ನಮ್ಮ ತಾಯಿಗೆ ಪೂಜೆ ಮಾಡಲು ಅವಕಾಶ ನೀಡಲೇಬೇಕು. ಕಾನೂನಾತ್ಮಕವಾಗಿ ಹೋರಾಟ ಮಾಡಿ ಹಕ್ಕು ಪಡೆಯುವುದಾಗಿ ಹೇಳಿ ಸಂಧಾನ ಸಭೆಯಿಂದ ಹೊರ ನಡೆದರು. ಗ್ರಾಪಂ ಅಧ್ಯಕ್ಷ ಲೋಕೇಶ್, ಮುಖಂಡರಾದ ಗೌಡರ್ ಎಂ.ಪಿ.ನಾಗರಾಜು, ಪಾರುಪತ್ತೇಗಾರ ಎಂ.ಬಿ.ಸಾಗರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ಮಹೇಂದ್ರಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net