

ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆರಂಭವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಅಧಿವೇಶನ ಎಂದರೆ ಗದ್ದಲ-ಗಲಾಟೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಈ ಬಾರಿಯೂ ಗದ್ದಲದಲ್ಲೇ ಅಧಿವೇಶನವನ್ನು ಅಂತ್ಯಗೊಳಿಸಲು ಬೇಕಾದಷ್ಟು ವಿಷಯಗಳು ಕಾದು ಕುಳಿತಿವೆ. ಬಳ್ಳಾರಿಯಲ್ಲಿ ಇತ್ತೀಚೆಗಷ್ಟೇ ಸಂಭವಿಸಿರುವ ಐವರು ಬಾಣಂತಿಯರ ಸಾವು, ಅಬಕಾರಿ ಇಲಾಖೆಯಲ್ಲಿ ನಡೆದ ಲಂಚ ಪ್ರಕರಣ, ಅಧಿಕಾರಿಗಳ ಆತ್ಮಹತ್ಯೆಗಳು, ಬಿಪಿಎಲ್ ಕಾರ್ಡ್ ವಿವಾದ, ಮುಡಾ ಹಗರಣ, ವಾಲ್ಮೀಕಿ ಮತ್ತು ಭೋವಿ ನಿಗಮದಲ್ಲಿ ನಡೆದ ಅವ್ಯವಹಾರಗಳು, ಇ-ಖಾತೆ ಸಮಸ್ಯೆ, ಕೋಮು ಗಲಭೆಗೆ ಸಂಬಂಧಿಸಿದ ಕೇಸ್ಗಳನ್ನು ವಾಪಸ್ ಪಡೆದಿರುವುದು, ಸಾವಿರಾರು ರೈತರ ಭೂಮಿಯ ಪಹಣಿಗಳಲ್ಲಿ ವಕ್ಪ್ ಜಮೀನು ಎಂದು ನಮೂದಿಸಿರುವುದಕ್ಕೆ ಸಂಬಂಧಿಸಿದ ವಿವಾದ ಹೀಗೆ ಒಂದೇ, ಎರಡೇ... ಬೇಕಾದಷ್ಟು ವಿವಾದಗಳನ್ನು ಪ್ರಸ್ತಾಪಿಸಲು ಅವಕಾಶವಿದೆ.
ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಾಳಯ ಕೂಡ ಬಿಜೆಪಿ ಸರ್ಕಾರದಲ್ಲಿ ಆಗಿರುವ ಹಗರಣಗಳನ್ನು ಪಟ್ಟಿ ಮಾಡಿಕೊಂಡಿದೆ. ಕೋವಿಡ್ ಸಮಯದಲ್ಲಿ ನಡೆದ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಆಗಿದೆ ಎನ್ನಲಾದ ಅವ್ಯವಹಾರ, ಆಯೋಗಗಳ ತನಿಖಾ ವರದಿಗಳು, ಉಪಚುನಾವಣೆಯ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸೋತಿರುವುದು, ಬಿಜೆಪಿಯಲ್ಲಿ ಢಾಳಾಗಿ ಗೋಚರಿಸುತ್ತಿರುವ ಭಿನ್ನಮತ ಮುಂತಾದವುಗಳನ್ನು ಕಾಂಗ್ರೆಸ್ ಪಾಳಯ ಪ್ರಸ್ತಾಪಿಸಿ ಪ್ರತಿಪಕ್ಷ ನಾಯಕರಿಗೆ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಇವೆಲ್ಲವೂ ಕಾವೇರಿದ ವಾಗ್ವಾದಕ್ಕೆ, ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗುವ ವಿಷಯಗಳೇ. ಎಷ್ಟೋ ಬಾರಿ ಯಾರೋ ಒಬ್ಬ ಸದಸ್ಯರು ಆಡಿದ ಒಂದು ಮಾತಿನಿಂದಾಗಿ ಇಡೀ ದಿನ ನಿಗದಿತ ಕಲಾಪ ನಡೆಯದೇ ಧರಣಿ, ಕೋಲಾಹಲ ನಡೆದ ಉದಾಹರಣೆಗಳೂ ನಮ್ಮ ಮುಂದಿವೆ.
ಕೆಲವೊಮ್ಮೆ ಇದು ಎರಡೂ ಕಡೆಯವರಿಗೆ ಪ್ರತಿಷ್ಠೆಯ ವಿಷಯವಾಗಿ ಹಲವು ದಿನಗಳ ಕಾಲ ಎಳೆದುಕೊಂಡು ಹೋಗಿದ್ದೂ ಇದೆ. ಪ್ರತಿದಿನವೂ ಅಧಿವೇಶನಕ್ಕೆ ತೆರಿಗೆದಾತರ ಕೋಟ್ಯಂತರ ರೂ. ಹಣ ವೆಚ್ಚವಾಗುತ್ತದೆ. ಅಧಿವೇಶನ ನಡೆಸುವುದು ರಾಜಕೀಯ ಪಕ್ಷಗಳ ಅಥವಾ ಚುನಾಯಿತ ಜನಪ್ರತಿನಿಧಿಗಳ ಪ್ರತಿಷ್ಠೆ ಅಥವಾ ಅಹಂ ಅನ್ನು ತಣಿಸುವುದಕ್ಕಾಗಿ ಅಲ್ಲ. ಜನರ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರಕ್ಕಾಗಿ. ಬೇಕಿದ್ದರೆ ರಾಜಕೀಯ ವಿವಾದದ ವಿಷಯಗಳನ್ನೆಲ್ಲಾ ಅಪರಾಹ್ನಕ್ಕೆ ಇಟ್ಟುಕೊಳ್ಳಲಿ. ಕನಿಷ್ಠ ಪಕ್ಷ ಬೆಳಗ್ಗೆಯಿಂದ ಮಧ್ಯಾಹ್ನದವರೆಗಿನ 3-4 ಗಂಟೆಗಳನ್ನಾದರೂ ಜನರ ಜ್ವಲಂತ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಲು ಮೀಸಲಿಡಬೇಕು. ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆಗಳಿಗೆ ಆದ್ಯತೆ ಸಿಗಬೇಕು.
ಇದನ್ನು ಅಧಿವೇಶನದ ಆರಂಭದಲ್ಲೇ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ರ್ಚಚಿಸಿ ಒಮ್ಮತಕ್ಕೆ ಬರಬೇಕು. ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ಅಧಿವೇಶನ ನಡೆಸುವುದೇ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ರ್ಚಚಿಸುವುದಕ್ಕಾಗಿ. ಅದಕ್ಕೇ ಸಮಯ ಸಿಗದಿದ್ದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಯೂ ಪ್ರಯೋಜನವಿಲ್ಲದಂತಾಗುತ್ತದೆ.